ಕಾರವಾರ: ಹಣ್ಣು, ಕಾಯಿ, ಫಲ, ತಾಂಬೂಲದ ಜತೆಗೆ ಮದ್ಯ ಮತ್ತು ಸಿಗರೇಟು ನೈವೇದ್ಯ ಬೇಡುವ ಖಾಪ್ರಿ ದೇವರ ಜಾತ್ರೆ ಭಾನುವಾರ ವಿಜೃಂಭಣೆಯಿಂದ ನಡೆಯಿತು. ನೂರಾರು ಭಕ್ತರು ಹರಕೆ ಅರ್ಪಿಸಿ ಭಕ್ತಿ ಮೆರೆದರು.
ಇಲ್ಲಿನ ಕೋಡಿಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಖಾಪ್ರಿ ದೇವಸ್ಥಾನ ಮದ್ಯ ಮತ್ತು ಸಿಗರೇಟು ನೈವೇದ್ಯದಿಂದಾಗಿ ಪ್ರಸಿದ್ಧಿ ಪಡೆದಿದೆ. ವಾರ್ಷಿಕ ವಾಡಿಕೆಯಂತೆ ಜಾತ್ರೆಯ ವೇಳೆ ಹರಕೆ ಹೊತ್ತಿದ್ದ ಭಕ್ತರು ವಿವಿಧ ಬಗೆಯ ಮದ್ಯ, ಸಿಗರೇಟು ಅರ್ಪಿಸಿದರು. ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.
ನೂರಾರು ವರ್ಷಗಳ ಹಿಂದೆ ಕೋಡಿಬಾಗಕ್ಕೆ ಆಫ್ರಿಕಾ ದೇಶದಿಂದ ಖಾಪ್ರಿ ಎಂಬ ಸಂತನೊಬ್ಬ ಬಂದಿದ್ದರಂತೆ. ಸಮೀಪದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ದಿವ್ಯ ಶಕ್ತಿಯಿಂದ ಹಲವು ತೊಂದರೆಗಳು ನಿವಾರಣೆಯಾದವಂತೆ. ಇದು ಸ್ಥಳೀಯರಲ್ಲಿ ಅವರ ಬಗ್ಗೆ ದೈವಿಕ ಭಾವನೆ ಮೂಡಿಸಿತು. ಅವರ ನಿಧನಾನಂತರ ಸುಂದರವಾದ ಗುಡಿಯನ್ನು ಅವರ ಅನುಯಾಯಿಗಳು ನಿರ್ಮಿಸಿದರು. ಅಲ್ಲಿ ಅವರ ನೆನಪಿನಲ್ಲಿ ಪೂಜೆ ಸಲ್ಲಿಸುತ್ತ, ಜಾತ್ರೆ ಮಹೋತ್ಸವಗಳನ್ನು ಆಚರಿಸುತ್ತ ಬರಲಾಗುತ್ತಿದೆ ಎಂದು ಅರ್ಚಕರು ತಿಳಿಸುತ್ತಾರೆ.
ಸರ್ವಾಲಂಕೃತ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಅರ್ಚಕರು, ಮರೆಯಲ್ಲಿರುವ ದೇವರ ಚಿಕ್ಕ ಮೂರ್ತಿಗೆ ಮದ್ಯವನ್ನು ಅಭಿಷೇಕ ಮಾಡುತ್ತಾರೆ. ಜಾತ್ರೆಗೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮೀಯರೂ ಬರುತ್ತಾರೆ. ಕರ್ಪೂರ, ಸಕ್ಕರೆ, ಅಗರಬತ್ತು, ಮೇಣದಬತ್ತಿಯನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.
‘ಹೆದ್ದಾರಿಯ ಅಂಚಿನಲ್ಲಿಯೇ ಇರುವ ಖಾಪ್ರಿ ದೇವರು ರಸ್ತೆ ಅಪಘಾತ ತಡೆಯುತ್ತಾನೆ, ಸಾವು ನೋವು ಆಗದಂತೆ ಕಾಯುತ್ತಾನೆ ಎಂಬ ನಂಬಿಕೆ ಇದೆ. ಲೋಕ ಕಲ್ಯಾಣಕ್ಕಾಗಿ ಜಾತ್ರೆಯ ವೇಳೆ ವಿಶೇಷ ಪೂಜೆ ಮಾಡಿಸಿ, ನೈವೇದ್ಯ ಸಮರ್ಪಿಸುತ್ತೇವೆ’ ಎಂದು ಕೋಡಿಬಾಗದ ಸರ್ವೇಶ್ ಕಲ್ಗುಟ್ಕರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.