ಹೊನ್ನಾವರ: ‘ತಾಲ್ಲೂಕಿನ ಗಾಣಗೆರೆ, ಕೈಕಂಟಗೇರಿ, ಗುಡ್ಡೇಬಾಳು, ಸ್ಥಿತಿಗಾರು, ಸಾಲ್ಕೋಡ ಹಾಗೂ ಕವಲಕ್ಕಿ ಭಾಗಗಳ ಜನವಸತಿ ಪ್ರದೇಶಗಳ ಸಮೀಪ ಚಿರತೆಗಳ ಓಡಾಟ ಕಂಡುಬಂದಿದೆ’ ಎಂದು ಆ ಭಾಗಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕೆಲವು ತಿಂಗಳುಗಳ ಹಿಂದೆ ಚಿರತೆ ಕಂಡು ಬಂದ ಕಾರಣ ಅದನ್ನು ಹಿಡಿಯಲು ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರು. ಆದರೆ ಬೋನಿನಲ್ಲಿ ಚಿರತೆ ಸೆರೆ ಸಿಕ್ಕಿಲ್ಲ. ಬುಧವಾರ ಸಂಜೆ ಸ್ಥಿತಿಗಾರ ಶಾಲೆಯ ಪಕ್ಕದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ವಿಷಯ ತಿಳಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ’ ಎಂದು ಗಾಣಗೆರೆಯ ವಿನಾಯಕ ಭಟ್ ಮಾಹಿತಿ ನೀಡಿದರು.
‘ಸ್ಥಿತಿಗಾರ ಶಾಲೆಯ ಸಮೀಪ ಮತ್ತೆ ಚಿರತೆ ಕಂಡು ಬಂದಿರುವುದನ್ನು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದು ಕೂಡಲೇ ನಮ್ಮ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆಯ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಆತಂಕ ಬೇಡ’ ಎಂದು ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.