ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ವಡ್ಡಿ ಘಟ್ಟದಲ್ಲಿ ರಸ್ತೆ ದುರಸ್ತಿಗೆ ಆಗ್ರಹ

ಪ್ರತಿ ದಿನ ನೂರಾರು ವಾಹನಗಳ ಸಂಚಾರ
Published 17 ಫೆಬ್ರುವರಿ 2024, 14:07 IST
Last Updated 17 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾಗಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಶಿರಸಿ-ವಡ್ಡಿ–ಅಂಕೋಲಾ ರಸ್ತೆಯ ಘಟ್ಟ ಪ್ರದೇಶದ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಡಕಾಗಿದೆ. ಕಾರಣ ಶಿರಸಿ ಮಾರಿಕಾಂಬಾ ಜಾತ್ರೆ ಪೂರ್ವ ರಸ್ತೆ ದುರಸ್ತಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರವಾರ, ಅಂಕೋಲಾ, ಗೋವಾ ಸೇರಿ ಘಟ್ಟದ ಕೆಳಗಿನ ಭಾಗಕ್ಕೆ ಭೇಟಿ ನೀಡುವ ಪ್ರಯಾಣಿಕರು ಹೆಗಡೆಕಟ್ಟಾ ಮೂಲಕ ವಡ್ಡಿ ಘಟ್ಟದ ರಸ್ತೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಪ್ರತಿ ದಿನ ನೂರಾರು ವಾಹನಗಳು ಸಂಚಾರ ಮಾಡುತ್ತವೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.

‘ಕಳೆದ ಕೆಲ ವರ್ಷಗಳ ಹಿಂದೆ ವಡ್ಡಿ ರಸ್ತೆ ಸಂಪೂರ್ಣ ಹಾಳಾಗಿತ್ತು. ಬಳಿಕ ಎರಡು ವರ್ಷಗಳ ಹಿಂದೆ ಅದನ್ನು ಸರಿಪಡಿಸಿ, ಘಟ್ಟದ ಜಾಗದಲ್ಲಿ ಹೊಸ ರಸ್ತೆ, ಸಿಮೆಂಟ್ ರಸ್ತೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿತ್ತು. ಇದರಿಂದ ಬಸ್ಸುಗಳ ಸಂಚಾರ ಮಾಡಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿತ್ತು. ಆದರೆ ಶಿರಸಿ ಮತ್ತು ಅಂಕೋಲಾ ಗಡಿ ಭಾಗದಲ್ಲಿ ಅಂದಾಜು 2 ಕಿಮೀ ರಸ್ತೆ ಸಂಪೂರ್ಣ ಕಚ್ಚಾ ರಸ್ತೆಯಾಗಿ ಮಾರ್ಪಾಟಾಗಿದ್ದು, ಓಡಾಟ ಕಷ್ಟವಾಗಿ ಪರಿಣಮಿಸಿದೆ’ ಎಂಬುದು ಸ್ಥಳೀಯರ ದೂರು. 

ಸ್ಥಳೀಯರಾದ ವಿ.ಆರ್.ಹೆಗಡೆ ಮಾತನಾಡಿ, ‘ಯಾಣ, ವಿಭೂತಿ ಫಾಲ್ಸ್, ಗೋಕರ್ಣ ಹೀಗೆ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಜನರು ಇದೇ ವಡ್ಡಿ ರಸ್ತೆಯನ್ನು ಅವಲಂಬಿಸಿದ್ದಾರೆ. ಯಾಣದ ಸಮೀಪವೇ ರಸ್ತೆ ಸಂಪೂರ್ಣ ಹಾಳಾಗಿದೆ. ಇಳಿಜಾರು ಪ್ರದೇಶದಲ್ಲಿ ಹಾಳಾದ ರಸ್ತೆ ಸರಿಪಡಿಸಲು ಇಲಾಖಾ ಅಧಿಕಾರಿಗಳು ಮನಸ್ಸು ಮಾಡದಿರುವುದು ವಿಪರ್ಯಾಸದ ಸಂಗತಿ’ ಎಂದರು.

‘ಶಿರಸಿ ಜಾತ್ರೆ ಮಾರ್ಚ್ 19ರಿಂದ ಆರಂಭವಾಗಲಿದೆ. ಕುಮಟಾ ರಸ್ತೆ ಸಂಚಾರ ದುಸ್ತರದ ಹಿನ್ನೆಲೆಯಲ್ಲಿ ವಡ್ಡಿ ಮಾರ್ಗದ ರಸ್ತೆಯಲ್ಲಿ ಸಾವಿರಾರು ವಾಹನ ಸಂಚಾರ ಆಗಲಿದೆ. ಹೀಗಾಗಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ, ಅಭಿವೃದ್ಧಿ ಮಾಡಿದಲ್ಲಿ ಪ್ರವಾಸಿಗರಿಗೆ, ಸ್ಥಳೀಯ ಜನರಿಗೆ ಅನುಕೂಲ ಆಗಲಿದೆ. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಯಾದರೆ ಬಸ್ಸುಗಳ ಸಂಚಾರಕ್ಕೂ ಅನುಕೂಲ ಆಗಲಿದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT