ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಕಮಲ ಪಾಳಯದಲ್ಲಿ ‘ಅಸಮಾಧಾನ’ ಪರ್ವ

ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಮೂವರಿಂದ ರಾಜೀನಾಮೆ
Published 20 ಫೆಬ್ರುವರಿ 2024, 5:18 IST
Last Updated 20 ಫೆಬ್ರುವರಿ 2024, 5:18 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ಹೊತ್ತಲ್ಲಿಯೇ ಬಿಜೆಪಿ ಪದಾಧಿಕಾರಿಗಳ ಅವಧಿ ಪೂರ್ಣಗೊಂಡು ಹೊಸ ಪದಾಧಿಕಾರಿಗಳ ನೇಮಕವಾಗಿದೆ. ನೇಮಕಾತಿಯ ಬಗ್ಗೆ ಪಕ್ಷದ ವಲಯದಲ್ಲಿ ಅಪಸ್ವರ ಹೆಚ್ಚಿದೆ.

ಜಿಲ್ಲಾ ಘಟಕ, ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಮೂವರು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕಕ್ಕೆ ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದ ಸಿದ್ದಾಪುರದ ನಾಗರಾಜ ನಾಯ್ಕ ಬೇಡ್ಕಣಿ, ಕೃಷ್ಣಮೂರ್ತಿ ಮಡಿವಾಳ ಹಾಗೂ ಸಿದ್ದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಎಸ್.ಕೆ.ಮೇಸ್ತ ರಾಜೀನಾಮೆ ಸಲ್ಲಿಸಿದವರು.

‘ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಹುದ್ದೆ ನೀಡಿಲ್ಲ. ಕೆಲವು ನಾಯಕರ ಸ್ವಜನ ಪಕ್ಷಪಾತದ ಕಾರಣಕ್ಕೆ ಅರ್ಹರಲ್ಲದವರಿಗೂ ಹುದ್ದೆ ಸಿಗುತ್ತಿವೆ. ಇದು ಸಂಘಟನೆಗೆ ಅಡ್ಡಿಯಾಗಬಹುದು. ಹೀಗಾಗಿ ವಾಟ್ಸ್‌ ಆ್ಯಪ್ ಮೂಲಕ ಜಿಲ್ಲಾ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ರವಾನಿಸಿ ಹುದ್ದೆ ತಿರಸ್ಕರಿಸಿದ್ದೇನೆ’ ಎಂದು ನಾಗರಾಜ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ಪಕ್ಷದ ಪದಾಧಿಕಾರಿಗಳ ನೇಮಕ ವಿಷಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಲಿಸಿಲ್ಲ. ಕೆಲವೇ ನಾಯಕರು ತಮಗೆ ಬೇಕಾದವರಿಗೆ ಹುದ್ದೆ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ಸಂಘಟನೆಗೆ ಕೆಲಸ ಮಾಡಿದವರ ಬದಲು ತಮ್ಮ ಬೆಂಬಲಿಗರಿಗೆ ಆಯಕಟ್ಟಿನ ಹುದ್ದೆ ದೊರೆಯುವಂತೆ ಮಾಡಿದ್ದಾರೆ. ಇದರಿಂದ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಸಹಜವಾಗಿ ಬೇಸರವಾಗಿದೆ’ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಕಳೆದ ಅವಧಿಯಲ್ಲಿ ಜಿಲ್ಲಾಮಟ್ಟದ ಹುದ್ದೆಯಲ್ಲಿದ್ದವರನ್ನು ಈ ಬಾರಿ ಅದಕ್ಕಿಂತ ಕೆಳಗಿನ ಹುದ್ದೆಗೆ ತಳ್ಳಲಾಗಿದೆ. ಸತತ ಎರಡು ಅವಧಿಯಿಂದ ಜಿಲ್ಲಾ ಘಟಕದ ಹುದ್ದೆಯಲ್ಲಿದ್ದ ಮುಖಂಡರೊಬ್ಬರಿಗೆ ಮಂಡಲ ಹುದ್ದೆ ನೀಡಲಾಗಿದೆ. ದೊಡ್ಡ ಮಟ್ಟದಲ್ಲಿ ಮತಬ್ಯಾಂಕ್ ಹೊಂದಿರುವ ನಾಯಕರನ್ನು ವಿಶೇಷ ಆಹ್ವಾನಿತ ಹುದ್ದೆಗೆ ಪರಿಗಣಿಸಲಾಗಿದೆ. ಅವರಿಗೆ ಜಿಲ್ಲಾಮಟ್ಟದ ದೊಡ್ಡ ಹುದ್ದೆಯಿಂದ ಹಿಂದೆ ಸರಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

‘ಜಿಲ್ಲಾ ಘಟಕದ ಪದಾಧಿಕಾರಿ ಹುದ್ದೆಯಲ್ಲಿ ಪ್ರಾದೇಶಿಕ ಅಸಮತೋಲನವೂ ಇದೆ. ಜೊಯಿಡಾ ತಾಲ್ಲೂಕಿನವರಿಗೆ ಸ್ಥಾನ ಸಿಕ್ಕಿಲ್ಲ. ಯಲ್ಲಾಪುರ, ಹಳಿಯಾಳ ಕ್ಷೇತ್ರದವರಿಗೆ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ. ಶಿರಸಿ, ಕಾರವಾರ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಪ್ರಾಶಸ್ತ್ರ ದೊರೆತಿದೆ. ಕಾರವಾರ ನಗರ ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷರನ್ನು ಇನ್ನೊಂದು ಅವಧಿಗೆ ಮುಂದುವರೆಸಿದ್ದು ಪಕ್ಷದಲ್ಲಿ ಅಚ್ಚರಿಯ ಬೆಳವಣಿಗೆ. ಇದು ಆಕಾಂಕ್ಷಿಗಳಾಗಿದ್ದವರಲ್ಲಿ ಅಸಮಾಧಾನ ಸೃಷ್ಟಿಸಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT