ಕಾರವಾರ: ‘ಎಚ್.ಐ.ವಿ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣುವ ಮನಸ್ಥಿತಿ ದೂರವಾಗಬೇಕು. ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಜ್ಜಪ್ಪ ಸೊಗಲದ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆರೋಗ್ಯ ಇಲಾಖೆ, ಏಡ್ಸ್ ಪ್ರಿವೆನ್ಷನ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಜಾಗೃತಿ ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
18 ರಿಂದ 25 ವರ್ಷ ವಯಸ್ಸಿನ ಯುವಕ, ಯುವತಿಯರಿಗೆ ಪ್ರತ್ಯೇಕ ವಿಭಾಗದಲ್ಲಿ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 60ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಪ್ರಥಮ ಸ್ಥಾನವನ್ನು ಯುವಕರ ವಿಭಾಗದಲ್ಲಿ ನಗರದ ಬಾಡದ ಶಿವಾಜಿ ಕಾಲೇಜಿನ ಜೋಸೆಪ್, ರಮೇಶಕುಮಾರ್ ಕಿನೇಕರ ದ್ವಿತೀಯ ಸ್ಥಾನ ಪಡೆದರು. ಯುವತಿಯರ ವಿಭಾಗದಲ್ಲಿ ಸರಸ್ವತಿ ವಿದ್ಯಾಲಯದ ಪ್ರಿಯಾರಾಮ ಮೊದಲ ಸ್ಥಾನ, ಸದಾಶಿವಗಡದ ಶಿವಾಜಿ ಕಾಲೇಜಿನ ಸಂಜನಾ ನೇಗಿನಹಾಳ ದ್ವಿತೀಯ ಸ್ಥಾನ ಪಡೆದರು.
ಜಿಲ್ಲಾ ಏಡ್ಸ್ ನಿಂಯತ್ರಣಾಧಿಕಾರಿ ಡಾ.ಮಂಜುನಾಥ ಇದ್ದರು. ಸ್ಪರ್ಧೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಚಾಲನೆ ನೀಡಿದ್ದರು.
ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಸುಭಾಷ ಕಾಮತ್, ಸುಧಾಕರ ಗುನಗಿ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.