ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಕಸದ ತೊಟ್ಟಿಯಾದ ಹಳಕಾರ ಅರಣ್ಯ

ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳೀಯರ ವಿರೋಧ
Published 11 ಅಕ್ಟೋಬರ್ 2023, 4:33 IST
Last Updated 11 ಅಕ್ಟೋಬರ್ 2023, 4:33 IST
ಅಕ್ಷರ ಗಾತ್ರ

ಕುಮಟಾ: ಪಟ್ಟಣದ ಆಮ್ಲಜನಕ ಪ್ರಯೋಗ ಶಾಲೆ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ಹಳಕಾರ ಗ್ರಾಮ ಅರಣ್ಯದಲ್ಲಿ ಸ್ಥಳೀಯ ಹೊಲನಗದ್ದೆ ಗ್ರಾಮ ಪಂಚಾಯ್ತಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿದೆ. ಅದಕ್ಕೆ ಗ್ರಾಮದ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದು, ಘಟಕ ಸ್ಥಾಪನೆಗೆ ಜಾಗದ ಗೊಂದಲ ಮುಂದುವರಿದಿದೆ.

ಪಟ್ಟಣದ ಹೆಗಡೆ ಹಾಗೂ ಅಘನಾಶಿನಿ ರಸ್ತೆ ನಡುವೆ ಸುಮಾರು 234 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಗ್ರಾಮ ಅರಣ್ಯದಲ್ಲಿ ರಾತ್ರಿ ಹೊತ್ತು ರಸ್ತೆಬದಿ ತ್ಯಾಜ್ಯ ಎಸೆದು ಹೋಗಲಾಗುತ್ತಿದೆ. ದಿನದಿಂದ ದಿನಕ್ಕೆ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ರಾಶಿಯ ಗಾತ್ರ ವಿಸ್ತರಿಸುತ್ತಿದೆ. ಗ್ರಾಮ ಅರಣ್ಯವು ಪಟ್ಟಣ ಪ್ರದೇಶದಲ್ಲಿದ್ದರೂ ಅದರ ಆಡಳಿತ ವ್ಯಾಪ್ತಿ ಗ್ರಾಮ ಪಂಚಾಯ್ತಿಗೆ ಸೇರಿದ್ದರಿಂದ ಇಲ್ಲಿ ಪುರಸಭೆ ಕಸ ವಿಲೇವಾರಿ ಮಾಡುತ್ತಿಲ್ಲ.

ಪಟ್ಟಣದ ಅಂಚಿನಲ್ಲೇ ಹರಡಿಕೊಂಡಿರುವ ಅರಣ್ಯದಲ್ಲಿ ನಿರ್ಜನ ಪ್ರದೇಶವಿರುವುದು ಕಸ ಎಸೆದು ಹೋಗುವವರಿಗೆ ಅನುಕೂಲವಾಗಿದೆ. ಪಟ್ಟಣದಿಂದ, ಗ್ರಾಮೀಣ ಭಾಗದ ಕೆಲವು ಕಡೆಗಳಿಂದಲೂ ಕಸ ತಂದು ಹಳಕಾರ ಅರಣ್ಯದಲ್ಲಿ ಎಸೆಯಲಾಗುತ್ತಿದೆ ಎಂಬುದು ಜನರ ಆರೋಪ.

‘ಹಳಕಾರ ಗ್ರಾಮ ಅರಣ್ಯ ಸಮಿತಿ ವತಿಯಿಂದ ಆಗಾಗ ಸ್ವಚ್ಛತೆ ನಡೆಸಲಾಗುತ್ತಿದೆ. ಆದರೂ ನಿತ್ಯ ರಾತ್ರಿ ಬಳಿಕ ಅರಣ್ಯ ಪ್ರದೇಶದಲ್ಲಿ ಕಸ ಎಸೆದು ಹೋಗಲಾಗುತ್ತಿದೆ. ಪರಿಸರಕ್ಕೆ ಹಾನಿಕಾರಕವಾದ ತ್ಯಾಜ್ಯಗಳೂ ಹೆಚ್ಚಿರುತ್ತವೆ. ಈ ಕಾರಣಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಗ್ರಾಮ ಅರಣ್ಯ ಸಮಿತಿಗೆ ಸೇರಿದ ಒಂದು ಗುಂಟೆ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪತ್ರವನ್ನೂ ನೀಡಲಾಗಿತ್ತು. ಈ ಜಾಗ ಬಳಸಿಕೊಂಡು ಘಟಕ ಸ್ಥಾಪನೆಗೆ ಗ್ರಾಮ ಪಂಚಾಯ್ತಿ ಮುಂದಾಗಬೇಕು’ ಎಂಬುದು ಹಳಕಾರ ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷ ನಾಗರಾಜ ಭಟ್ಟ ಅವರ ಅಭಿಪ್ರಾಯ.

‘ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿದ್ದ ವೇಳೆ ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಉದ್ದೇಶಿತ ಯೋಜನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಜನರ ಮನವೊಲಿಸುವ ಪ್ರಯತ್ನ ಸಾಗಿದೆ’ ಎಂದು ಹೊಲನಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಹೆಗಡೆ ಹೇಳಿದರು.

ಗ್ರಾಮ ಅರಣ್ಯ ಸಮಿತಿ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನಗೊಳಿಸುವ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಒ ಜತೆ ಚರ್ಚಿಸಿ ನಿರ್ಣಯಿಸಲಾಗುವುದು.

-ಸತೀಶ ಗೌಡ ತಹಶೀಲ್ದಾರ್ ಹಾಗೂ ಗ್ರಾಮ ಅರಣ್ಯ ಸಮಿತಿಯ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT