ಶನಿವಾರ, ಏಪ್ರಿಲ್ 1, 2023
29 °C
ಕಾರವಾರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ:ಶಿರಸಿಯಲ್ಲಿ ವಿ.ವಿ. ಸ್ಥಾಪನೆಗೆ ಒತ್ತಡ

ಚುನಾವಣೆಗೆ ಮುನ್ನ ಜಿಲ್ಲೆಗೆ ವಿಶ್ವವಿದ್ಯಾಲಯ?

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಕನ್ನಡ ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರು ಮಾಡಿಸಲು ಪ್ರಯತ್ನ ನಡೆದಿದೆ. ಶಿರಸಿಯಲ್ಲೇ ವಿ.ವಿ. ಸ್ಥಾಪಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ–2022 ಜಾರಿಗೆ ತಂದಿದ್ದ ರಾಜ್ಯ ಸರ್ಕಾರ ಏಳು ಜಿಲ್ಲೆಗಳಲ್ಲಿ ಹೊಸದಾಗಿ ವಿಶ್ವವಿದ್ಯಾಲಯ ಮಂಜೂರು ಮಾಡಿದೆ. ಜಿಲ್ಲಾ ಕೇಂದ್ರ ಅಥವಾ ಜಿಲ್ಲೆಯಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದ (ಪಿ.ಜಿ.ಸೆಂಟರ್) ಕಟ್ಟಡದಲ್ಲಿ ವಿಶ್ವವಿದ್ಯಾಲಯ ಆರಂಭಿಸಲು ಸೂಚನೆ ನೀಡಿದೆ. ಉತ್ತರ ಕನ್ನಡದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾರವಾರದಲ್ಲಿದೆ. 

ನೆರೆಯ ಹಾವೇರಿ ಸೇರಿದಂತೆ ಏಳು ಕಡೆಗಳಲ್ಲಿ ಹೊಸ ವಿಶ್ವವಿದ್ಯಾಲಯ ಮಂಜೂರು ಮಾಡಿದ ಬಳಿಕ ಉತ್ತರ ಕನ್ನಡದಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಡ ಹೇರಲು ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರು ಮಾಡಬೇಕು ಮತ್ತು ಅದನ್ನು ಶಿರಸಿಯಲ್ಲಿ ಸ್ಥಾಪಿಸಬೇಕು ಎಂಬ ನಿಲುವು ಪ್ರದರ್ಶಿಸಿದ್ದಾರೆ. ಇದರ ಭಾಗವಾಗಿ ಇಲ್ಲಿನ ನಗರಸಭೆ ಸದಸ್ಯರ ನಿಯೋಗವನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿಸಿದ್ದರು.

‘ಶಿರಸಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ನಗರಸಭೆ ಸಭೆಯಲ್ಲಿ ಠರಾವು ಮಾಡಿದ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರುವ ಜತೆಗೆ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ ಅವರು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದ್ದ ಜಾಗದಲ್ಲಿ ಹೊಸ ವಿಶ್ವವಿದ್ಯಾಲಯ ಮಂಜೂರು ಮಾಡಲು ಸದ್ಯಕ್ಕೆ ಸಾಧ್ಯವಿದೆ ಎಂದರು’ ಎಂದು ನಿಯೋಗದಲ್ಲಿದ್ದ ಸದಸ್ಯರೊಬ್ಬರು ತಿಳಿಸಿದರು.

ಈಚೆಗೆ ಶಿರಸಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಶಿರಸಿಯಲ್ಲೇ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇನೆ. ಶೀಘ್ರವೇ ಅದು ಕೈಗೂಡುವ ಸಾಧ್ಯತೆ ಇದೆ ಎಂದು ಕಾಗೇರಿ ಹೇಳಿದ್ದರು.

ಸದ್ಯ ಕಾರವಾರದಲ್ಲಿ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಕುಮಟಾ ಮತ್ತು ಶಿರಸಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊಂದಿವೆ.

--------------------

ಶಿರಸಿ ಶೈಕ್ಷಣಿಕ ಕೇಂದ್ರವಾಗಿಯೂ ಬೆಳೆಯುತ್ತಿರುವದರಿಂದ ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಸೂಕ್ತವಾಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭಾಧ್ಯಕ್ಷ

---------------

ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಮೊದಲ ಬಾರಿಗೆ ಜಿಲ್ಲೆಯ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದೆ. ಜಿಲ್ಲೆಯ ಸೂಕ್ತ ಸ್ಥಳದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ.

ದಿನಕರ ಶೆಟ್ಟಿ

ಕುಮಟಾ ಶಾಸಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು