ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ: ಹದಗೆಟ್ಟ ಪೂಜಗೇರಿ ಸೇತುವೆಯಲ್ಲಿ ಆತಂಕದ ಸವಾರಿ

ಶಿರೂರು ದುರಂತದ ಬಳಿಕ ಪರ್ಯಾಯ ಮಾರ್ಗದಲ್ಲಿ ಹೆಚ್ಚಿದ್ದ ವಾಹನ ಓಡಾಟ
ಮೋಹನ ದುರ್ಗೇಕರ
Published : 5 ಆಗಸ್ಟ್ 2024, 4:59 IST
Last Updated : 5 ಆಗಸ್ಟ್ 2024, 6:45 IST
ಫಾಲೋ ಮಾಡಿ
Comments

ಅಂಕೋಲಾ: ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿದ ನಂತರ ಇಲ್ಲಿನ ಮಂಜಗುಣಿ ಸೇತುವೆ ಮೇಲಿಂದ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಈ ಸೇತುವೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿಯ ಪೂಜಗೇರಿ ಸೇತುವೆ ಸ್ಥಿತಿ ಹದಗೆಟ್ಟಿದೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ಸೇತುವೆಯ ಒಂದು ಭಾಗದಲ್ಲಿ ಸುರಕ್ಷತಾ ಗೋಡೆ ತುಂಡಾಗಿ ತಾತ್ಕಾಲಿಕವಾಗಿ ಕಟ್ಟಿಗೆಯ ಪಟ್ಟಿಯನ್ನು ಅಳವಡಿಸಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ರಸ್ತೆ ಹದಗೆಟ್ಟಿದ್ದರಿಂದ ತಾತ್ಕಾಲಿಕವಾಗಿ ಜಲ್ಲಿ ಕಲ್ಲು ಬಳಸಿ ಹೊಂಡಗಳನ್ನು ಭರ್ತಿ ಮಾಡಲಾಗುತ್ತಿದೆ. ಆದರೂ, ಈ ಮಾರ್ಗದಲ್ಲಿ ಸಂಚಾರ ನಡೆಸಲು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.

‘ಪೂಜಗೇರಿ ಭಾಗದಲ್ಲಿ ಸರ್ಕಾರಿ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಶಾಲಾ ಕಾಲೇಜುಗಳು ಇದ್ದು ಪ್ರತಿದಿನ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಅಂಕೋಲಾ–ಗೋಕರ್ಣ ಸಂಪರ್ಕ ಸಾಧಿಸುವ ಸೇತುವೆಯ ಮೂಲಕ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿವೆ. ಪೂಜಗೇರಿ ಸೇತುವೆ ಬಳಿ ಹೊಂಡಗಳಿಂದ ವಾಹನಗಳು ನಿಯಂತ್ರಣ ತಪ್ಪುತ್ತಿದ್ದು ಮಳೆಯ ಸಂದರ್ಭದಲ್ಲಿ ಸೇತುವೆಯ ರಕ್ಷಣಾ ಗೋಡೆ ಮುರಿದ ಭಾಗದಿಂದ ಹಳ್ಳದ ನೀರಿಗೆ ಬೀಳುವ ಅಪಾಯದ ಸಾಧ್ಯತೆ ಇದೆ’ ಎನ್ನುತ್ತಾರೆ ಸ್ಥಳೀಯ ಕೃಷ್ಣ ಗಾಂವಕರ.

‘ರಸ್ತೆಯು ಹದಗೆಟ್ಟಿದ್ದರಿಂದ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಉಂಟಾಗುತ್ತಿದೆ. ಶಿರೂರು ದುರಂತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಎರಡು ವಾರಗಳ ಕಾಲ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದ್ದವು. ಇದರಿಂದ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಯಿತು’ ಎಂದೂ ಹೇಳಿದರು.

‘ಪೂಜಗೇರಿ ಸೇತುವೆ ದುರಸ್ತಿಪಡಿಸುವ ಜತೆಗೆ ಮಂಜಗುಣಿ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಮರು ಡಾಂಬರೀಕರಣ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸೇತುವೆ ದುರಸ್ತಿಗೆ ಈ ಹಿಂದೆಯೆ ಟೆಂಡರ್ ಕರೆಯಲಾಗಿದೆ. ಸೇತುವೆ ಆದಷ್ಟು ಬೇಗನೆ ದುರಸ್ತಿ ಮಾಡಲಾಗುವುದು. ಹದಗೆಟ್ಟ ರಸ್ತೆಯ ದುರಸ್ತಿಯೂ ನಡೆಯಲಿದೆ.
ಇಸಾಕ್ ಸೈಯ್ಯದ್ ಲೋಕೋಪಯೋಗಿ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT