ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ ನಗರಸಭೆ ರಚನೆಗೆ ಪ್ರಾಥಮಿಕ ಸಿದ್ಧತೆ: ಪರ–ವಿರೋಧ ಚರ್ಚೆ

Published 11 ಫೆಬ್ರುವರಿ 2024, 6:45 IST
Last Updated 11 ಫೆಬ್ರುವರಿ 2024, 6:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಸೂಕ್ಷ್ಮ ಪ್ರದೇಶ ಎನಿಸಿರುವ ‘ಭಟ್ಕಳ’ ಈಗ ಪುನಃ ಚರ್ಚೆಯಲ್ಲಿದೆ. ಪುರಸಭೆಯನ್ನು ನಗರಸಭೆ ದರ್ಜೆಗೆ ಏರಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೀಡಿದ ಶಿಫಾರಸು ಪತ್ರವೇ ಇದಕ್ಕೆ ಕಾರಣ.

‘ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ, ಹೆಬಳೆ ಗ್ರಾಮ ಪಂಚಾಯಿತಿ ಪ್ರದೇಶ ಒಟ್ಟುಗೂಡಿಸಿ ‘ಭಟ್ಕಳ ನಗರಸಭೆ’ ರಚನೆಗೆ ಸೂಕ್ತವಿದೆ. ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು’ ಎಂದು ಎಂದು ಭಟ್ಕಳ ಶಾಸಕರೂ ಆಗಿರುವ ಮಂಕಾಳ ವೈದ್ಯ ಅವರು ಜನವರಿ 12ರಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಅವರಿಗೆ ಪತ್ರ ಬರೆದಿದ್ದಾರೆ.

‘2011ರ ಜನಗಣತಿ ಪ್ರಕಾರ, ಭಟ್ಕಳದಲ್ಲಿ 32 ಸಾವಿರ, ಜಾಲಿಯಲ್ಲಿ 19 ಸಾವಿರ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಸಾವಿರ ಜನಸಂಖ್ಯೆ ಇತ್ತು. ಈಗ ಮೂರು ಪ್ರದೇಶ ಸೇರಿ 75 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ’ ಎಂಬ ಉಲ್ಲೇಖ ಪತ್ರದಲ್ಲಿದ್ದೆ.

‘ಭಟ್ಕಳವನ್ನು ನಗರಸಭೆ ಮೇಲ್ದರ್ಜೆಗೇರಿಸಲು 2014 ರಿಂದ ಪ್ರಯತ್ನ ನಡೆದಿದೆ. ಅಂದು ಜಾಲಿ ಪಟ್ಟಣ ಪಂಚಾಯಿತಿಯೂ ಆಗಿರಲಿಲ್ಲ. ಆಗಿನ ಪುರಸಭೆ ಆಡಳಿತ ಮಂಡಳಿಯು ಸಭೆ ನಡೆಸಿ, ಮೇಲ್ದರ್ಜೆಗೇರಿಸುವ ಪ್ರಸ್ತಾವ ಸಲ್ಲಿಕೆಗೆ ಠರಾವು ಮಾಡಿತ್ತು. ಆಗಲೂ ಶಾಸಕರಾಗಿದ್ದ ಮಂಕಾಳ ವೈದ್ಯ ಅವರು ನಗರಸಭೆ ಮೇಲ್ದರ್ಜೆಗೇರಿಸಲು ಪ್ರಯತ್ನಿಸಿದ್ದರು. ಈಗಲೂ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಸಚಿವರ ಬೆಂಬಲಿಗರೊಬ್ಬರು ತಿಳಿಸಿದರು.

‘ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸ್ವಾಗತವಿದೆ. ಭಟ್ಕಳ ಪುರಸಭೆ ಜೊತೆ ಗಡಿ ಹಂಚಿಕೊಂಡಿರುವ ಶಿರಾಲಿ, ಯಲ್ವಡಿಕವೂರು, ಮುಟ್ಟಳ್ಳಿ, ಮುಂಡಳ್ಳಿ ಪ್ರದೇಶಗಳನ್ನೂ ನಗರಸಭೆ ವ್ಯಾಪ್ತಿಗೆ ಸೇರಿಸಬೇಕು’ ಎಂದು ಬಿಜೆಪಿ ಭಟ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ ತಿಳಿಸಿದರು.

‘ಭಟ್ಕಳ ನಗರಸಭೆ ರಚಿಸಲು ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಮಾತ್ರ ಸೇರಿಸಲು ಪ್ರಯತ್ನ ನಡೆದಿದೆ. ಇದು ಭಟ್ಕಳ ಮತ್ತು ಜಾಲಿಯ ಆಡಳಿತದಲ್ಲಿ ನಿಯಂತ್ರಣ ಹೊಂದಿರುವ ತಂಜೀಮ್ ಸಂಸ್ಥೆಗೆ ಅಧಿಕಾರ ದೊರೆಯುವಂತೆ ಮಾಡಿ, ಅವರನ್ನು ಓಲೈಸಲು ನಡೆಸುತ್ತಿರುವ ಪ್ರಯತ್ನ’ ಎಂದು ಅವರು ಆರೋಪಿಸಿದರು.

ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿದರೆ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂಬ ಉದ್ದೇಶವಿದೆಯೇ ಹೊರತು ಬೇರೆ ಯಾವ ರಾಜಕೀಯ ದುರುದ್ದೇಶವೂ ಇಲ್ಲ.
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಭಟ್ಕಳ ನಗರಸಭೆ ರಚನೆಗೆ ವಿರೋಧವಿಲ್ಲ. ಆದರೆ ಸಮುದಾಯವೊಂದರ ಓಲೈಕೆಗೆ ನಿರ್ದಿಷ್ಟ ಪ್ರದೇಶ ಮಾತ್ರ ಸೇರಿಸದೆ ಪಟ್ಟಣದ ಗಡಿಗೆ ಹೊಂದಿಕೊಂಡ ಉಳಿದ ಗ್ರಾಮಗಳೂ ಸೇರ್ಪಡೆಯಾಗಲಿ.
ಸುಬ್ರಾಯ ದೇವಾಡಿಗ ಅಧ್ಯಕ್ಷ ಬಿಜೆಪಿ ಭಟ್ಕಳ ತಾಲ್ಲೂಕು ಘಟಕ
‘ಪ್ರಸ್ತಾವಕ್ಕೆ ಸೂಚನೆ’
‘ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಜನಸಂಖ್ಯೆ ಪ್ರಮಾಣ ಭೌಗೋಳಿಕ ರಚನೆ ಪರಿಗಣಿಸಲಾಗುತ್ತದೆ. ಭಟ್ಕಳ ಮತ್ತು ಅದಕ್ಕೆ ಹೊಂದಿಕೊಂಡ ಕೆಲ ಸ್ಥಳೀಯ ಸಂಸ್ಥೆ ಸೇರಿಸಿ ಜನಸಂಖ್ಯೆ ಇನ್ನಿತರ ಮಾಹಿತಿ ನೀಡುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿಕೋಶಕ್ಕೆ ಸರ್ಕಾರದ ನಿರ್ದೇಶನ ಬಂದಿದೆ. ಅದನ್ನು ಆಧರಿಸಿ ನಗರಾಭಿವೃದ್ಧಿಕೋಶವು ಸ್ಥಳೀಯ ಸಂಸ್ಥೆಗೆ ಸೂಚನೆ ನೀಡಿರಬಹುದು. ಹಂತ ಹಂತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ನಂತರ ಭಟ್ಕಳ ಪುರಸಭೆಯನ್ನು ನಗರಸಭೆ ಮೇಲ್ದರ್ಜೆಗೇರಿಸಲು ಸೂಕ್ತ ಪ್ರಸ್ತಾವದೊಂದಿಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಕೆ ಆಗಲಿದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT