ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ | ನಾಮಫಲಕ ಕಂಬ ತೆರವು: ಮುಂದುವರಿದ ಪ್ರತಿಭಟನೆ

ವಿವಾದಿತ ನಾಮಫಲಕ ಕಂಬ ತೆರವು ಮಾಡಿದ ಜಾಲಿ ಪ.ಪಂ.
Published 15 ಜನವರಿ 2024, 13:35 IST
Last Updated 15 ಜನವರಿ 2024, 13:35 IST
ಅಕ್ಷರ ಗಾತ್ರ

ಭಟ್ಕಳ: ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸಲು ಹಾಕಲಾಗಿದ್ದ ಕಂಬವನ್ನು ಜಾಲಿ ಪಟ್ಟಣ ಪಂಚಾಯ್ತಿಯವರು ಸೋಮವಾರ ಮುಂಜಾನೆ ತೆರವು ಮಾಡಿದನ್ನು ಖಂಡಿಸಿ ಒಂದು ಕೋಮಿನವರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕಂಬ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿದರು.

ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಮಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

ಸೋಮವಾರ ಮುಂಜಾನೆ 3 ಗಂಟೆಗೆ ಜಾಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಜೊತೆ ತೆರಳಿ ನಾಮಫಲಕ ಅಳವಡಿಸಲು ಹಾಕಲಾಗಿರುವ ಕಂಬವನ್ನು ತೆರವುಗೊಳಿಸಿದ್ದರು. ಇದರಿಂದ ಕುಪಿತರಾದ ಒಂದು ಕೋಮಿನ ಯುವಕರು ಸ್ಥಳದಲ್ಲಿಯೇ ಪ್ರತಿಭಟೆನೆಗೆ ಕುಳಿತು ಜಾಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾಲಿ ಪುರಸಭಾ ಸದಸ್ಯ ದಯಾನಂದ ನಾಯ್ಕ, ‘ದೇವಿನಗರದಲ್ಲಿರುವ ಮದರಸಾ ಕಟ್ಟಡವನ್ನು ಬದಲಾಯಿಸಿ ಮಸೀದಿ ಮಾಡಲಾಗಿದೆ. ಮೈಕ್ ಅಳವಡಿಸಿ ಪ್ರಾರ್ಥನೆ ಮಾಡಲಾಗುತ್ತಿದೆ. ಇದಕ್ಕೆ ಪಟ್ಟಣ ಪಂಚಾಯ್ತಿಯಿಂದ ಪರವಾನಗಿ ಇರುವುದಿಲ್ಲ. ಇಂತಹ ಅನೇಕ ಕಟ್ಟಡಗಳು ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಇದ್ದರೂ ಪಟ್ಟಣ ಪಂಚಾಯ್ತಿ ನಾವು ಹಾಕಿಲಾಗಿದ್ದ ಕಂಬವನ್ನು ಮಾತ್ರ ಅನಧಿಕೃತ ಎಂದು ಕಿತ್ತುಹಾಕಿದೆ. ನಮ್ಮ ಕಂಬವನ್ನು ಕಿತ್ತು ತೆಗೆದಂತೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧೀಕೃತವಾಗಿ ಹಾಕಿರುವ ಎಲ್ಲವನ್ನೂ ಕಿತ್ತು ಹಾಕಬೇಕು. ಇಲ್ಲವೆ ಇಂದೇ ನಮ್ಮ ಕಂಬವನ್ನ ನಾಮಫಲಕ ಅಳವಡಿಸಲು ಮರುಸ್ಥಾಪಿಸಿ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯ ಕಾವು ಹೆಚ್ಚಾದಂತೆ ಸ್ಥಳಕ್ಕಾಗಮಿಸಿದ ಭಟ್ಕಳ ತಹಶೀಲ್ದಾರ್ ತಿಪ್ಪಿಸ್ವಾಮಿ ಮಾತನಾಡಿ, ಈ ಬಗ್ಗೆ ಉಭಯ ಕೋಮಿನ ಸಭೆ ಕರೆದು ಚರ್ಚಿಸಿ, ನಾಮಫಲಕ ಅಳವಡಿಸುವ ಜಾಗವು ಅಧಿಕೃವಾಗಿದಲ್ಲಿ ಪರವಾನಗಿ ನೀಡುವ ಭರವಸೆ ನೀಡಿದರು.

ಇದಕ್ಕೆ ಒಪ್ಪದ ಪ್ರತಿಭಟನೆಕಾರರರು ಒಂದು ದಿನದ ಕಾಲಾವಧಿ ನೀಡುತ್ತಿದ್ದು, ಆ ಅವಧಿಯ ಒಳಗೆ ನಾಮಫಲಕ ಅಳವಡಿಸಲು ಅವಕಾಶ ನೀಡದಿದ್ದಲಿ ಪುನಃ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದರು.

ಎರಡು ದಿವಸಗಳಿಂದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೂ ಹಿಂದೂ ಮುಖಂಡರು ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಗೆ ಹೋರಾಟಕ್ಕೆ ಸ್ಪಂದಿಸದಿರುವುದಕ್ಕೆ ಕೆಲ ಯುವಕರು ಸ್ಥಳದಲ್ಲಿಯೇ ಅಸಮಾಧಾನ ಹೊರಹಾಕಿದರು. ಚುನಾವಣೆ ಸಮಯದಲ್ಲಿ ಹಿಂದೂತ್ವದ ಭಾಷಣ ಮಾಡುವ ಮುಖಂಡರು ಈ ಸಮಯದಲ್ಲಿ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ದೇವಿನಗರದಲಿ ನಾಮಫಲಕವನ್ನು ಅಳವಡಿಸಲು ಯಾವುದೇ ಪರವಾನಗಿ ಸ್ಥಳೀಯರು ಪಡೆದುಕೊಂಡಿಲ್ಲ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಂಬವನ್ನು ತೆರವುಗೊಳಿಸಲಾಗಿದೆ
–ಮಂಜಪ್ಪ ಮುಖ್ಯಾಧಿಖಾರಿ ಜಾಲಿ ಪ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT