ಕುಮಟಾ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಹಂದಿಗೋಣದ ಎರಡು ಕುಟುಂಬಗಳ ಆರು ಜನರನ್ನು ಸಮೀಪದ ಶಾಲೆಯಲ್ಲಿ ಆರಂಭಿಸಿದ ಕಾಳಜಿ ಕೇಂದ್ರಕ್ಕೆ ಬುಧವಾರ ಸ್ಥಳಾಂತರಿಸಲಾಗಿದೆ.
ಹಂದಿಗೋಣ ರಾಜ್ ಗ್ರಾನೈಟ್ ಬಳಿ ತಗ್ಗು ಪ್ರದೇಶದಲ್ಲಿ ಮನೆಗಳಿವೆ. ಹಿಂದೆ ಮಳೆ ನೀರು ಹರಿದು ಸುತ್ತಲಿನ ಸಣ್ಣ ಹೊಳೆಗಳ ಮೂಲಕ ಸಮುದ್ರ ಸೇರುತ್ತಿತ್ತು. ಈಗ ಸುತ್ತಲೂ ಮಣ್ಣು ತುಂಬಿ ಹೊಸ ಮನೆ ಹಾಗೂ ಉದ್ಯಮ ಕೇಂದ್ರಗಳನ್ನು ನಿರ್ಮಿಸಿದ್ದರಿಂದ ನೀರು ಹರಿದು ಹೋಗಲು ಹಳ್ಳಗಳೇ ಇಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ.
ಪಟ್ಟಣದ ಹೊನಮಾಂವ್ ಬಳಿ ವ್ಯಕ್ತಿಯೊಬ್ಬರ ಮನೆಯ ಅಂಗಳಕ್ಕೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿರುವ ಶಶಿಹಿತ್ತಲು, ಕಲ್ಲುಸಂಕ ಮುಂತಾದೆಡೆ ಗಟಾರ ತುಂಬಿ ರಸ್ತೆ ಜಲಾವೃತಗೊಂಡಿತ್ತು. ಅಳ್ವೆಕೋಡಿಯಲ್ಲಿ ಇನ್ನೂ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾಗದ್ದರಿಂದ ಮಳೆ ನೀರು ಹರಿಯದೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿದೆ.
‘ಪಟ್ಟಣ ವ್ಯಾಪ್ತಿಯಲ್ಲಿ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಾಗ ತಕ್ಷಣ ಅದನ್ನು ಬಿಡಿಸಿಕೊಡಲಾಗಿದೆ. ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ತಡೆಯಲು ಜೆಸಿಬಿ ಯಂತ್ರ ಹಾಗೂ ಅಗತ್ಯ ಸಿಬ್ಬಂದಿ ಸನ್ನದ್ಧರಾಗಿದ್ದಾರೆ’ ಎಂದು ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ತಿಳಿಸಿದರು.
ಗ್ರಾಮ ಲೆಕ್ಕಿಗ ಅಣ್ಣಯ್ಯ ಲಮಾಣಿ, ಪಿಡಿಒ ಡಿ. ಪ್ರಜ್ಞಾ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ವೀಣಾ ಕಾರವಾರ ಇದ್ದರು.
ಮಳೆಗೆ ಕುಮಟಾ ಪಟ್ಟಣದ ಹೊನ್ಮಾಂವ್‌ನ ಮನೆಯೊಂದರ ಅಂಗಳಕ್ಕೆ ನೀರು ನುಗ್ಗಿತ್ತು
ಕುಮಟಾ ತಾಲ್ಲೂಕಿನ ಹಂದಿಗೋಣದಲ್ಲಿ ಬುಧವಾರ ಆರಂಭವಾದ ಕಾಳಜಿ ಕೇಂದ್ರಕ್ಕೆ ತಹಶೀಲ್ದಾರ್ ಎಸ್.ಎಸ್. ನಾಯ್ಕಲಮಠ ಭೇಟಿ ನೀಡಿದರು