ಜೊಯಿಡಾ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಶನಿವಾರ ತುಸು ತಣ್ಣಗಾಗಿತ್ತು. ಪ್ರತಿ ದಿನವೂ ಹಗಲಿನಲ್ಲಿ ತುಸು ಬಿಡುವು ನೀಡುವ ಮಳೆ ರಾತ್ರಿಯಿಡೀ ಧಾರಾಕಾರವಾಗಿ ಸುರಿಯುತ್ತಿದೆ. ಶನಿವಾರ ತಾಲ್ಲೂಕಿನ ಅತ್ಯಧಿಕ ಎಂಬಂತೆ ಅಣಶಿಯಲ್ಲಿ 12 ಸೆಂ.ಮೀ ಮತ್ತು ಕ್ಯಾಸಲ್‌ರಾಕ್ ಭಾಗದಲ್ಲಿ 11.6 ಸೆಂ.ಮೀ ಮಳೆ ದಾಖಲಾಗಿದೆ.
ಕುಂಡಲ ಭಾಗದಲ್ಲಿ ನಿರಂತರವಾಗಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಅಪ್ಪರ ಕಾನೇರಿ ಜಲಾಶಯಕ್ಕೆ ಹೆಚ್ಚಿನ ನೀರು ಬಂದು ಗುರುವಾರ ರಾತ್ರಿ ಕುಂಡಲ ಭಾಗದ ಎಂಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ಜನ ಸಂಚಾರಕ್ಕೆ ಶುಕ್ರವಾರ ದೋಣಿ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ಮಳೆಯಲ್ಲಿ ಮೂರನೇ ಬಾರಿಗೆ ಸೇತುವೆ ಮುಳುಗಿದೆ.
ಮಳೆ ಗಾಳಿಗೆ ಹುಡಸಾದಲ್ಲಿ ಮಾಬಳು ದೇಸಾಯಿ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದ್ದು ಅಡಿಕೆ ಗಿಡಗಳು ಗಾಳಿಗೆ ಮುರಿದು ಬಿದ್ದಿವೆ. ಅಡಿಕೆ ಸಹ ಉದುರಿ ಬಿದ್ದು ಹಾನಿಯಾಗಿದೆ.
ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ಅಂಬಾಳಿ, ಬಜಾರಕುಣಂಗ, ಉಳವಿ ಮತ್ತು ಕುಂಡಲ ಭಾಗದ ಹಲವು ಹಳ್ಳಿಗಳಿಗೆ ವಿದ್ಯುತ್ ಇಲ್ಲದೇ ಜನರು 15ಕ್ಕೂ ಹೆಚ್ಚು ದಿನಗಳಿಂದ ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ.
ಸುಪಾ ಜಲಾನಯನ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು 564 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಶನಿವಾರ 556.47 ಮೀಟರ್‌ಗಳಷ್ಟು ನೀರು ಸಂಗ್ರಹವಾಗಿದೆ. 40,466.846 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರಿಗೆ ಪ್ರವಾಹದ ಎರಡನೇ ಮುನ್ನೆಚ್ಚರಿಕೆ ಸೂಚನೆ ಸಹ ನೀಡಲಾಗಿದೆ.
ಜೊಯಿಡಾ ತಾಲ್ಲೂಕಿನ ಹುಡಸಾದಲ್ಲಿ ಮಾಬಳು ದೇಸಾಯಿ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿರುವುದು
ಜೊಯಿಡಾ ತಾಲ್ಲೂಕಿನ ಹುಡಸಾದಲ್ಲಿ ಮಾಬಳು ದೇಸಾಯಿ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿರುವುದು
ಜೊಯಿಡಾ ತಾಲ್ಲೂಕಿನ ಕುಂಡಲ ಭಾಗದ ಎಂಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕುಂಡಲ ಸೇತುವೆ ಮುಳುಗಿದ್ದು ಜನ ಸಂಚಾರಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ