ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗೇರರಿಗೆ ಎಸ್.ಸಿ ಪ್ರಮಾಣ ಪತ್ರ: ಪರಿಶೀಲನೆಗೆ ಸಮಿತಿ ರಚನೆ

ಪ್ರಮಾಣ ಪತ್ರ ವಿತರಣೆಯಲ್ಲಿ ಗೊಂದಲ ನಿವಾರಣೆಗೆ ಯತ್ನ: ಜಿಲ್ಲಾಧಿಕಾರಿ
Last Updated 23 ಜೂನ್ 2022, 15:39 IST
ಅಕ್ಷರ ಗಾತ್ರ

ಭಟ್ಕಳ: ‘ಜಿಲ್ಲೆಯಲ್ಲಿ ಮೊಗೇರ ಸಮುದಾಯದವರಿಗೆ ಪರಿಶಿಷ್ಟ ಜಾತಿ (ಎಸ್.ಸಿ) ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸುವ ಅಥವಾ ಮಾರ್ಪಾಡು ಮಾಡುವ ಕುರಿತು ಪರಿಶೀಲಿಸಲಾಗುವುದು. ಇದಕ್ಕಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.

ಅವರು ಪ‍ಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಮೊಗೇರ ಸಮುದಾಯದ ಪ್ರಮುಖರ ಜೊತೆ ಸಭೆ ನಡೆಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಮೊಗೇರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ಗೊಂದಲಗಳಾಗಿವೆ. ಸಮಿತಿಯ ಮೂಲಕ ಸಮಗ್ರವಾಗಿ ಪರಿಶೀಲಿಸಿ, ಮೂರು ತಿಂಗಳ ಒಳಗೆ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಲ್.ನರಸಿಂಹ ಮೂರ್ತಿ ಸೂಚಿಸಿದ್ದಾರೆ. ಅಲ್ಲಿಯವರೆಗೆ ತಾವು ಧರಣಿಯನ್ನು ಕೈ ಬಿಡಬೇಕು’ ಎಂದು ಅವರು ಮುಖಂಡರಿಗೆ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಶಾಸಕ ಮಂಕಾಳ ವೈದ್ಯ, ‘ರಾಷ್ಟ್ರಪತಿ ಅಂಕಿತ ಹಾಕಿ ಕೇಂದ್ರ ಸರ್ಕಾರವು ಒಮ್ಮೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಿದ ಬಳಿಕ, ಅದನ್ನು ರದ್ದುಪಡಿಸುವ ಹಕ್ಕು ರಾಜ್ಯ ಸರ್ಕಾರಕ್ಕಿಲ್ಲ. ಒಂದೊಮ್ಮೆ ಅದು ರದ್ದಾಗಬೇಕು ಎಂದಾದರೆ ಮತ್ತೆ ರಾಷ್ಟ್ರಪತಿಯ ಅಂಕಿತ ಬೇಕು. ಹೀಗಿರುವಲ್ಲಿ ರಾಜ್ಯ ಸರ್ಕಾರ ಇದನ್ನು ಹೇಗೆ ರದ್ದು ಪಡಿಸಿತು? ಪ್ರವರ್ಗ 1ರಲ್ಲಿ ಹೇಗೆ ಸೇರಿಸಲಾಯಿತು’ ಎಂದು ಪ್ರಶ್ನಿಸಿದರು.

ಮುಖಂಡ ಗಣೇಶ ಮೊಗೇರ ಮಾತನಾಡಿ, ‘ನಮ್ಮ ಅಜ್ಜ, ಅಪ್ಪ, ನಾನು ಪರಿಶಿಷ್ಟ ಜಾತಿಯವರು. ನಮ್ಮ ಮಕ್ಕಳು ಬೇರೆ. ಇದು ಹೇಗೆ ಸಾಧ್ಯ? ನಾವು ಧರಣಿ ಆರಂಭಿಸಿ 93 ದಿನಗಳ ಬಳಿಕ ನೀವು ಸಮಿತಿ ರಚನೆ ಮಾಡುತ್ತೀರಿ. ಮತ್ತೆ ಮೂರು ತಿಂಗಳು ನಾವು ಧರಣಿ ಮಾಡುವುದಿಲ್ಲ. ಕಾರವಾರದವರೆಗೆ ಪಾದಯಾತ್ರೆ ನಡೆಸಿ ಜೈಲು ಭರೋ ಮಾಡುತ್ತೇವೆ’ ಎಂದು ಆಕ್ರೋಶ ಹೊರ ಹಾಕಿದರು.

ಹಿರಿಯ ಅಧಿಕಾರಿಗಳ ಸಮಿತಿ:ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್, ‘ಮೊಗೇರ ಸಮುದಾಯಕ್ಕೆ ಎಸ್.ಸಿ ಪ್ರಮಾಣ ಪತ್ರದ ಕುರಿತು ಉಂಟಾಗಿರುವ ಗೊಂದಲ ನಿವಾರಿಸಲು ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹಾಗೂ ಮೈಸೂರು ಮಾನವ ಶಾಸ್ತ್ರ ವಿಭಾಗದ ಪ್ರೊಫೆಸರ್ ಇರಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಉಪ ವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ್ ಸುಮಂತ ಬಿ.ಇ. ಡಿವೈಎಸ್ಪಿ ಕೆ.ಬೆಳ್ಳಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT