ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಪೊಗಳತ್ತ ಸುಳಿಯದ ಮಹಿಳೆಯರು: ʼಶಕ್ತಿʼಯಿಂದ ಅತಂತ್ರರಾದ ಟೆಂಪೊ, ಕ್ರೂಸರ್ ಚಾಲಕರು ‌

Published 18 ಜೂನ್ 2023, 13:59 IST
Last Updated 18 ಜೂನ್ 2023, 13:59 IST
ಅಕ್ಷರ ಗಾತ್ರ

ಮುಂಡಗೋಡ: ದಶಕಗಳಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿದ್ದ ಟೆಂಪೊ ಹಾಗೂ ಕ್ರೂಸರ್‌ಗಳು ಮನೆಯ ಮುಂದೆ ನಿಲ್ಲುವಂತ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳನ್ನು ಉಚಿತವಾಗಿ ಕರೆದೊಯ್ಯುತ್ತಿದ್ದ ಹಾಗೂ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಸೌಲಭ್ಯ ನೀಡುತ್ತಿದ್ದ ಟೆಂಪೊಗಳು ಪ್ರಯಾಣಿಕರಿಲ್ಲದೇ, ಸಂಜೆವರೆಗೂ ನಿಂತಲ್ಲೇ ನಿಲ್ಲುತ್ತಿವೆ. ಸರ್ಕಾರದ ʼಶಕ್ತಿʼ ಯೋಜನೆ ಹಲವರಿಗೆ ವರದಾನವಾದರೆ, ಇನ್ನೂ ಕೆಲವರಿಗೆ ಶಾಪವಾಗಿ ಪರಿಣಮಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಯಲ್ಲಾಪುರ-ಮುಂಡಗೋಡ ಮಧ್ಯೆ ನಿತ್ಯವೂ 18ಕ್ಕಿಂತ ಹೆಚ್ಚು ಟೆಂಪೊ ಹಾಗೂ ಕ್ರೂಸರ್‌ಗಳು ಸಂಚರಿಸುತ್ತಿದ್ದವು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ನಿಲ್ದಾಣದಿಂದ ಹೊರಡುವ ಮುನ್ನವೇ, ಖಾಸಗಿ ಟೆಂಪೊ ಹಾಗೂ ಕ್ರೂಸರ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಇದರಿಂದ ಬೆಳಗಿನ ಅವಧಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನಿತ್ಯ ಕೆಲಸದ ನಿಮಿತ್ತ ಹೋಗುವ ಜನರು ಖಾಸಗಿ ವಾಹನಗಳಲ್ಲಿಯೇ ಹೆಚ್ಚು ಸಂಚರಿಸುತ್ತಿದ್ದರು. ಅದರಲ್ಲಿಯೂ ಮಹಿಳಾ ಪ್ರಯಾಣಿಕರು ತುಸು ಹೆಚ್ಚಾಗಿರುತ್ತಿದ್ದರು. ಬಸ್‌ ನಿಲ್ದಾಣಕ್ಕೆ ಯಲ್ಲಾಪುರ ಅಥವಾ ಮುಂಡಗೋಡ ಕಡೆ ಹೋಗುವ ಬಸ್‌ ಬರಲು ತುಸು ತಡವಾಗಬಹುದಿತ್ತು. ಆದರೆ, ನಿಲ್ದಾಣದ ಅನತಿ ದೂರದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರಿಗಾಗಿ ನಿಂತಿರುತ್ತಿದ್ದವು. ಪ್ರತಿ ಅರ್ಧ ಗಂಟೆಗೊಮ್ಮೆ ತಾಲ್ಲೂಕು ಸ್ಥಳದಿಂದ ಹೊರಡುತ್ತಿದ್ದ ಟೆಂಪೊ ಅಥವಾ ಕ್ರೂಸರ್‌ಗಳಿಗೆ ಸದ್ಯ, ಪ್ರತಿ ಎರಡು ಗಂಟೆಯಾದರೂ ಅರ್ಧದಷ್ಟು ಪ್ರಯಾಣಿಕರು ಬರುತ್ತಿಲ್ಲ ಎಂದು ಟೆಂಪೊ ಚಾಲಕರು ಅಸಹಾಯಕರಾಗಿ ಹೇಳುತ್ತಾರೆ.

ʼಯಲ್ಲಾಪುರ ಹಾಗೂ ಮುಂಡಗೋಡ ಕಡೆಯಿಂದ ತಲಾ 9 ಟೆಂಪೊ ಹಾಗೂ ಕ್ರೂಸರ್‌ಗಳು ನಿತ್ಯವೂ ಸಂಚರಿಸುತ್ತಿದ್ದವು. ಇವುಗಳನ್ನು ಹೊರತುಪಡಿಸಿ ಮೂರು ವಾಹನಗಳು ಹೆಚ್ಚುವರಿಯಾಗಿ ನಿಲ್ಲುತ್ತಿದ್ದವು. ಪ್ರತಿ ಅರ್ಧ ಗಂಟೆಗೊಮ್ಮೆ ಎರಡೂ ಬದಿಯಿಂದ ಟೆಂಪೊ ಹಾಗೂ ಕ್ರೂಸರ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ನಿಲ್ದಾಣ ಬಿಡುತ್ತಿದ್ದವು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ನಿಲ್ದಾಣದಿಂದ ಹೊರಡುವುದಕ್ಕಿಂತ ಅರ್ಧ ಗಂಟೆ ಮೊದಲೇ, ಟೆಂಪೊಗಳು ಸಂಚರಿಸುತ್ತಿದ್ದರಿಂದ ಪ್ರಯಾಣಿಕರ ಕೊರತೆ ಇರಲಿಲ್ಲ. ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಿದ್ದರೂ, ಖಾಸಗಿ ವಾಹನಗಳಿಗೆ ನಷ್ಟ ಆಗಿರಲಿಲ್ಲ. ನಿತ್ಯ ಸಂಚರಿಸುವ ಪ್ರಯಾಣಿಕರು ಮನೆಯ ಗಾಡಿ ಎಂಬಂತೆ ಹೊಂದಿಕೊಂಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ವಾಹನಗಳ ಹತ್ತಿರ ಪ್ರಯಾಣಿಕರೇ ಸುಳಿಯತ್ತಿಲ್ಲʼ ಎಂದು ಕ್ರೂಸರ್‌ ಚಾಲಕ ಜಗದೀಶ ಹೇಳಿದರು.

ʼಯಲ್ಲಾಪುರ ಮಾರ್ಗದ ಪ್ರಾಥಮಿಕ ಶಾಲೆಗಳಿಗೆ ಹೋಗುವ ಶಿಕ್ಷಕರಿಗೆ ಅವರ ಸಮಯಕ್ಕೆ ತಕ್ಕಂತೆ ಬೆಳಿಗ್ಗೆ ಒಂದು ವಾಹನವನ್ನು ಬಿಡಲಾಗುತ್ತಿತ್ತು. ಅದರಲ್ಲಿ ಬಡ್ಡಿಗೇರಿಯಿಂದ ಮೈನಳ್ಳಿಗೆ ಹೋಗುವ ವಿದ್ಯಾರ್ಥಿಗಳೂ ಸಂಚರಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಹಿರಿಯ ನಾಗರಿದ್ದರೇ, ರಿಯಾಯಿತಿ ದರದಲ್ಲಿ ಹಣ ಪಡೆಯಲಾಗುತ್ತಿತ್ತು. ಶಾಲೆ ಬಿಡುವ ಸಂಜೆಯ ಸಮಯಕ್ಕೆ ಸರಿಯಾಗಿ ಟೆಂಪೊ ಇದೇ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಖಾಸಗಿ ವಾಹನಗಳಿಂದ ಶಿಕ್ಷಕ, ವಿದ್ಯಾರ್ಥಿ ಸೇರಿದಂತೆ ಎಲ್ಲರಿಗೂ ಅನುಕೂಲವಾಗಿತ್ತು. ಆದರೆ, ಉಚಿತ ಪ್ರಯಾಣ ಘೋಷಣೆ ಆದಾಗಿನಿಂದ ಮಹಿಳೆಯರು ಟೆಂಪೊಗಳತ್ತ ಸುಳಿಯುತ್ತಿಲ್ಲ. ಕೇವಲ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋದರೇ, ಡೀಸೆಲ್‌ ಹಾಕಿಸಿದ ಹಣವೂ ಸಿಗುವುದಿಲ್ಲʼ ಎಂದು ಅವರು ಹೇಳಿದರು.

ʼಸರ್ಕಾರದ ಶಕ್ತಿ ಯೋಜನೆಯನ್ನು ವಿರೋಧಿಸುವುದಿಲ್ಲ. ಆದರೆ, ಖಾಸಗಿ ವಾಹನಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಸರ್ಕಾರ ಆರ್ಥಿಕ ಸಹಾಯ ಒದಗಿಸಲಿ. ಚಾಲಕ, ಮಾಲಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲಿ. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸೇವೆ ನೀಡದಿದ್ದಾಗಲೂ ಟೆಂಪೊಗಳನ್ನು ಓಡಿಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ, ಸರ್ಕಾರದ ಯೋಜನೆಯು ಬಡ ಚಾಲಕ, ಮಾಲಕರಿಗೆ ದುಡಿಯುವ ಶಕ್ತಿ ಇಲ್ಲದಂತೆ ಮಾಡುತ್ತಿದೆʼ ಎಂದು ಪ್ರಯಾಣಿಕ ರಾಘವೇಂದ್ರ ಶಿರಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT