ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದ್ದ ಶರಾಬಿ ನದಿಗೂ ಮಲಿನತೆ ಶಾಪ!

ಭಟ್ಕಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಲಮೂಲಕ್ಕೆ ಅಭಿವೃದ್ಧಿಯ ನಿರೀಕ್ಷೆ
Last Updated 16 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಶರಾಬಿ ನದಿಗೆ ಐತಿಹಾಸಿಕ ಹಿನ್ನೆಲೆಯಿದೆ. ರಾಣಿ ಚೆನ್ನಭೈರಾದೇವಿ ಕಾಳು ಮೆಣಸು ಮಾರಿದ, ಅರಬ್ಬರು ಬಟ್ಟೆ ಬರೆಗಳನ್ನು ವ್ಯಾಪಾರ ಮಾಡಿದ್ದು ಈ ನದಿಯಚೌಥನಿಯಲ್ಲಿ. ಮುಂಡಳ್ಳಿ ಗೌಸಿಯಾ ಸ್ಟ್ರೀಟ್ ಮೂಲಕ ಹಾದು ಸಮುದ್ರ ಸೇರುವನದಿಯ ದಂಡೆ ಈಗ ಕಾಲಿಡಲೂ ಆಗದಷ್ಟು ಮಲಿನಗೊಂಡಿದೆ.

ನದಿ ದಂಡೆಯ ಮೇಲೆ ಅರಬ್ಬರು ಬಟ್ಟೆ ಬರೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿದ್ದರು. ಸನಿಹದಲ್ಲೇ ಹಾಸು ಕಲ್ಲುಗಳನ್ನು ಇಟ್ಟು ನಮಾಜು ಮಾಡಿದ್ದಾರೆ. ‘ಕಾಳು ಮೆಣಸಿನ ರಾಣಿ’ ಎಂದೇ ಹೆಸರಾಗಿದ್ದ, ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರಿಗೆ ಜಮೀನನ್ನು ಉಂಬಳಿಯಾಗಿ ನೀಡಿದ್ದವಳು ರಾಣಿ ಚೆನ್ನಭೈರಾದೇವಿ.ಇಂದಿನ ಹಾಡುವಳ್ಳಿಯನ್ನು (ಅಂದಿನ ಸಂಗೀತಪುರ) ಆಳಿದ್ದ ರಾಣಿ, ಇದೇ ಜಾಗದಲ್ಲಿ ಅರಬ್ಬರೊಂದಿಗೆ ಕಾಳು ಮೆಣಸನ್ನು ತಂದು ವ್ಯಾಪಾರ ಮಾಡಿದ್ದಳು.

ಟಿಪ್ಪುಸುಲ್ತಾನ್, ಇದೇ ಶರಾಬಿ ನದಿ ದಂಡೆಯ ಮೇಲೆ ಅರಬ್ಬರು ತಂದಿದ್ದ ಕುದುರೆಗಳನ್ನು ಖರೀದಿಸಿ,ಮೈಸೂರಿಗೆ ಕೊಂಡೊಯ್ದ ವಿಚಾರವೂ ಇತಿಹಾಸದ ಪುಟಗಳಲ್ಲಿವೆ.

ಹಾಸು ಕಲ್ಲು ಅನಾಥ: ಇಷ್ಟೆಲ್ಲ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ನದಿ ದಂಡೆಈಗಯಾರೂ ಕಾಲಿಡಲಾಗದಷ್ಟು ಮಲಿನಗೊಂಡಿದೆ.ದಂಡೆಯಲ್ಲಿದ್ದ ಒಂದಷ್ಟು ಕಲ್ಲುಗಳು ಈಗಾಗಲೇ ನದಿಗೆ ಜಾರಿ ಹೋಗಿವೆ. ಮತ್ತೊಂದಷ್ಟು ಕಲ್ಲುಗಳು ಬೀಳುವ ಹಂತದಲ್ಲಿವೆ. ನದಿಯ ತುಂಬ ಹೂಳು ತುಂಬಿಕೊಂಡಿದ್ದು, ಮಳೆಗಾಲದಲ್ಲಿ ನೆರೆಯ ಸಂಕಷ್ಟವುಂಟಾಗುತ್ತಿದೆ.

ಸುತ್ತಮುತ್ತಲಿನ ಗ್ರಾಮಗಳ ಶೌಚಾಲಯದ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ನದಿಯ ಸೇತುವೆಯ ಪಕ್ಕದಲ್ಲೇ ಇರುವ ತ್ಯಾಜ್ಯ ವಿಲೇವಾರಿ ಘಟಕದ ನೀರು ಸಹ ನದಿ ನೀರಿಗೆ ಸೇರಿಕೊಳ್ಳುತ್ತಿದೆ. ಇದರ ಪರಿಣಾಮ ನೀರು ದುರ್ನಾತ ಬೀರುತ್ತಿದ್ದು, ಸ್ಥಳೀಯರು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಇನಾಯತ್ ಗವಾಯ್ ದೂರಿದರು.

ಪ್ರವಾಸಿ ತಾಣವಾಗಬಹುದು:ಶರಾಬಿ ನದಿಯ ದಂಡೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಅವಕಾಶಗಳಿವೆ.ನದಿ ದಂಡೆಯ ಉದ್ದಕ್ಕೂ ಗೋಡೆ ನಿರ್ಮಿಸಿ ವಿದ್ಯುತ್ ದೀಪ ಅಳವಡಿಸುವುದು ಅವಶ್ಯವಾಗಿದೆ.

‘ವಿಶ್ರಾಂತಿಮಾಡಲು ಆಸನಗಳನ್ನು ಅಳವಡಿಸಿ, ನದಿಯಲ್ಲಿನ ಹೂಳು ತೆಗೆದು ದೋಣಿ ವಿಹಾರ ನಡೆಸಿ, ವ್ಯಾಪಕ ಪ್ರಚಾರ ನೀಡುವ ಅಗತ್ಯವಿದೆ.ವಿಶ್ವಪ್ರಸಿದ್ದ ಮುರ್ಡೇಶ್ವರಕ್ಕೆ ಬರುವ ಸಾವಿರಾರು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಇಲ್ಲಿಗೂ ಭೇಟಿ ನೀಡುತ್ತಾರೆ’ ಎನ್ನುವುದು ಮುರ್ಡೇಶ್ವರ ಆರ್‌.ಎನ್ಎ.ಸ್ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಎಂ.ಎಸ್.ಹೆಗಡೆ ಗುಣವಂತೆ ಅವರ ಸಲಹೆ.

ಭಟ್ಕಳಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಟಿಪ್ಪು ಸುಲ್ತಾನ್, ತಾನು ಬಂದಾಗ ಉಳಿಯಲೆಂದು ಸಣ್ಣದಾಗಿ ಕಟ್ಟಿಕೊಂಡಿದ್ದ ಮನೆಯೊಂದು ಪಟ್ಟಣದಲ್ಲಿದೆ. ಆರಸ್ತೆ ಈಗ ‘ಸುಲ್ತಾನ್ ಸ್ಟ್ರೀಟ್’ ಎಂದೇ ಪ್ರಸಿದ್ಧವಾಗಿದೆ. ಆ ಸ್ಥಳವನ್ನೂ ಪ್ರವಾಸಿ ತಾಣವನ್ನಾಗಿ ಪರಿಚಯಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT