ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್‌ ಆಸ್ತಿ ಒತ್ತುವರಿ; ಮಾಣಿಪ್ಪಾಡಿ ವರದಿ ಸತ್ಯಕ್ಕೆ ದೂರ: ಕೆ.ಅನ್ವರ್ ಬಾಷಾ

Published 30 ಡಿಸೆಂಬರ್ 2023, 14:36 IST
Last Updated 30 ಡಿಸೆಂಬರ್ 2023, 14:36 IST
ಅಕ್ಷರ ಗಾತ್ರ

ಶಿರಸಿ: ‘ರಾಜ್ಯದಾದ್ಯಂತ ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ನೀಡಿದ್ದ ವರದಿಯು ಶೇ 99ರಷ್ಟು ವಾಸ್ತವಕ್ಕೆ ದೂರವಾದ ಅಂಶಗಳನ್ನು ಹೊಂದಿವೆ’ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಬಾಷಾ ಹೇಳಿದರು. 

‘ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿ ಬಗ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನ್ವರ್ ಮಾಣಿಪ್ಪಾಡಿ 6 ಸಾವಿರ ಪುಟಗಳ ಸಮೀಕ್ಷಾ ವರದಿ ನೀಡಿದ್ದರು. ಅದರಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬಂದಿದ್ದವು. ಆದರೆ ಈ ವರದಿ ಅನುಷ್ಠಾನದ ಬಗ್ಗೆ ಬಿಜೆಪಿ ಸರ್ಕಾರದಲ್ಲೇ ಸಹಮತ ಇರಲಿಲ್ಲ. ಮಾಣಿಪ್ಪಾಡಿ ಅವರು ಗಾಜಿನ ಮನೆಯಲ್ಲಿ ಕುಳಿತು ಈ ವರದಿ ಸಿದ್ಧಪಡಿಸಿದ್ದರು’ ಎಂದು ಅವರು ಸುದ್ದಿಗಾರರಿಗೆ ಶನಿವಾರ ಹೇಳಿದರು.

‘ನಾನು ಅಧ್ಯಕ್ಷನಾದ ಬಳಿಕ ಆ ವರದಿ ಆಧರಿಸಿ ರಾಜ್ಯ ಪ್ರವಾಸ ಕೈಗೊಂಡೆ. ಆದರೆ, ಅದರಲ್ಲಿ ಉಲ್ಲೇಖಿಸಿದ ಜಮೀರ್ ಅಹಮದ್, ಖಮರುಲ್ ಇಸ್ಲಾಂ, ನಜೀರ್ ಅಹ್ಮದ್ ಸೇರಿ ಯಾರೊಬ್ಬರು ವಕ್ಫ್ ಆಸ್ತಿ ಕಬಳಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ಅವರು ತಿಳಿಸಿದರು.

‘ಬೀದರ್ ಜಿಲ್ಲೆಯಲ್ಲಿ ಮಾತ್ರ ಶೇ 2ರಿಂದ 3ರಷ್ಟು ಅಂಶ ವಾಸ್ತವಕ್ಕೆ ಹತ್ತಿರವಿದೆ. ಶಿರಸಿಯಂಥ ಸಣ್ಣ ನಗರದಲ್ಲಿ ಸುಲ್ತಾನಿಯಾ ಜಾಮಿಯಾ ಮಸೀದಿ ಆಸ್ತಿ ಅತಿಕ್ರಮಣ ಆಗಿದೆ. ಮಳಿಗೆಗಳನ್ನು ನಿಯಮ ಮೀರಿ ಉಪ ಬಾಡಿಗೆ ನೀಡಲಾಗಿದೆ. ದಶಕಗಳಿಂದ ಬಾಡಿಗೆ ಪರಿಷ್ಕರಣೆ ಆಗಿಲ್ಲ. ಇಷ್ಟು ಗಂಭೀರ ಸ್ವರೂಪದ  ವಕ್ಫ್ ಆಸ್ತಿ ಅತಿಕ್ರಮಣವಾದ ಬಗ್ಗೆ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖವೇ ಇಲ್ಲ’ ಎಂದರು. 

‘ವಕ್ಫ್ ಆಸ್ತಿ ಅತಿಕ್ರಮಣವಾದ ಬಗ್ಗೆ ದೂರು ಬಂದ ಕಾರಣ ಕೆಲ ಕಡೆ ತೆರವು ಕಾರ್ಯ ನಡೆದಿದೆ. ಉಳಿದ ಕಡೆ ಹಂತ ಹಂತವಾಗಿ ತೆರವು ಮಾಡಲಾಗುವುದು. ಕೆಲವು ಪ್ರಕರಣಗಳು ಕೋರ್ಟ್ ಹಂತದಲ್ಲಿದ್ದು, ತೀರ್ಪಿನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

ಮಂಡಳಿಯ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅನೀಸ್ ತಹಶೀಲ್ದಾರ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT