ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ನಿರ್ವಹಣೆ ಕೊರತೆ, ಅಂದ ಕಳೆದುಕೊಂಡ ಉದ್ಯಾನಗಳು

Published 26 ಫೆಬ್ರುವರಿ 2024, 7:13 IST
Last Updated 26 ಫೆಬ್ರುವರಿ 2024, 7:13 IST
ಅಕ್ಷರ ಗಾತ್ರ

ಶಿರಸಿ: ನಗರ ಸೌಂದರ್ಯಕ್ಕೆ ಪೂರಕವಾಗಿ ನಗರಸಭೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೋಟ್ಯಂತರ ರೂಪಾಿ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನಗಳು ನಿರ್ವಹಣೆ ಕೊರತೆ ಜತೆ ನೀರಿನ ತುಟಾಗ್ರತೆಯಿಂದ ತಮ್ಮ ಅಂದ ಕಳೆದುಕೊಂಡಿವೆ.

ಬೇಸಿಗೆ ಆರಂಭದೊಂದಿಗೆ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದೆ. ಇಂಥ ಕಾಲಘಟ್ಟದಲ್ಲಿ ನಗರಸಭೆ ನೀರು ಆಶ್ರಯಿಸಿ ಹಸಿರಾಗಿದ್ದ ಉದ್ಯಾನಗಳ ಗಿಡಮರಗಳು ಸರಿಯಾಗಿ ನೀರಿಲ್ಲದೆ ಸೊರಗಿ ನಿಂತಿವೆ.

ಪ್ರಸ್ತುತ ಬಿಸಿಲಿನ ಪ್ರಖರತೆ ದಿನೇದಿನೆ ಹೆಚ್ಚುತ್ತಿದ್ದು, ಇದರಿಂದ ಉದ್ಯಾನಗಳಲ್ಲಿ ಹಸಿರು ಮಾಯವಾಗಿ, ಎತ್ತ ನೋಡಿದರೂ ಒಣಗಿದ ಹುಲ್ಲು, ಗಿಡಗಳ ದರ್ಶನ ಆಗುತ್ತಿದೆ. ಉದ್ಯಾನದಲ್ಲಿರುವ ಅಲಂಕಾರಿಕ ಗಿಡಗಳು ಬಿಸಿಲಿಗೆ ಬಸವಳಿದು ಬಾಗುತ್ತಿವೆ. ಇದರಿಂದಾಗಿ ಸಾರ್ವಜನಿಕರು ಉದ್ಯಾನಗಳತ್ತ ಮುಖ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. 

ನಗರದ ಕೆ.ಎಚ್.ಬಿ. ಕಾಲೋನಿ, ಇಂದಿರಾನಗರ, ಮರಾಠಿಕೊಪ್ಪ, ಬನವಾಸಿ ರಸ್ತೆ ಕೂರ್ಸೆ ಕಾಂಪೌಂಡ್, ದುಂಡಶಿನಗರ ಸೇರಿ ಹಲವೆಡೆ ಉದ್ಯಾನಗಳಿವೆ. ಇವುಗಳಲ್ಲಿ ಮರಾಠಿಕೊಪ್ಪದ ಅಮರ್ ಜವಾನ್ ಉದ್ಯಾನ ಸ್ವಲ್ಪಮಟ್ಟಿನ ನಿರ್ವಹಣೆಯಿಂದ ಜನಬಳಕೆಗೆ ಯೋಗ್ಯವಾಗಿವೆ. ಆದರೆ ಇಲ್ಲಿಯೂ ಗಿಡಗಳಿಗೆ ನಿರಂತರ ನೀರಿನ ಸಮಸ್ಯೆಯಿದೆ. ಉಳಿದವುಗಳು ನಿರ್ವಹಣೆ ವ್ಯವಸ್ಥಿತ ಇಲ್ಲದ ಕಾರಣಕ್ಕೆ ಜನರಿಂದ ದೂರಾಗಿವೆ.

‘ಮಳೆ ಸರಿಯಾಗಿ ಆಗದ ಕಾರಣ ಹಾಗೂ ನೀರಿನ ಕೊರತೆಯಿಂದ ಈಗಲೇ ಉದ್ಯಾನ ಹಸಿರು ಕಳೆದುಕೊಳ್ಳುತ್ತಿವೆ. ಕಳೆದ ವರ್ಷಗಳಲ್ಲಿ ನೆಟ್ಟ ಗಿಡಗಳು ಇನ್ನೇನು ಜೀವ ಹೋಗುವ ಹಂತ ತಲುಪಿವೆ. ಈಗಲೇ ಇಂಥ ಸ್ಥಿತಿಯಾದರೆ ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಸಸ್ಯಗಳು ಸಾಯಲಿವೆ. ನಗರಸಭೆ ಈ ಬಗ್ಗೆ ಕ್ರಮವಹಿಸುತ್ತಿಲ್ಲ’ ಎಂಬುದು ಇಲ್ಲಿನ ನಾಗರಿಕರ ದೂರು.

‘ನಗರಸಭೆಯಲ್ಲಿ ಉದ್ಯಾನಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ವಾರ್ಷಿಕ ಲಕ್ಷಾಂತರ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ. ಆದರೆ ವರ್ಷಪೂರ್ತಿ ಈ ಉದ್ಯಾನಗಳು ಜೀಡು, ಹುಲ್ಲು, ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿರುತ್ತವೆ. ಕೆಲವೆಡೆ ಗಿಡಗಳ ಕಟಿಂಗ್ ಮಾಡದೆ ಓಡಾಡಲು ಆಗದ ಸ್ಥಿತಿ ಇದೆ. ಆಗೊಮ್ಮೆ ಈಗೊಮ್ಮೆ ಸ್ವಚ್ಛತೆಯ ಕಾರ್ಯ ಮಾಡಿ ನಗರಸಭೆಯವರೂ ಸುಮ್ಮನಾಗುತ್ತಿದ್ದಾರೆ. ಕೆಲ ಉದ್ಯಾನಗಳಲ್ಲಿ ಇರುವ ಕೊಳವೆಬಾವಿಗಳ ದುರಸ್ತಿ ಕಾರ್ಯವಾಗಿಲ್ಲ. ನಗರಸಭೆಯವರು ವಿತರಿಸುವ ನೀರು ಕೂಡ ಹೋಗುತ್ತಿಲ್ಲ. ಹೀಗಾಗಿ ಅಂಥ ಉದ್ಯಾನಗಳು ಈ ಬೇಸಿಗೆಯಲ್ಲಿ ಉಳಿಯುವುದು ಕಷ್ಟ. ಟ್ಯಾಂಕರ್ ಮೂಲಕವಾದರೂ ನೀರು ನೀಡಿ ಗಿಡಗಳನ್ನು ಉಳಿಸಿಕೊಳ್ಳಬೇಕು’ಎನ್ನುತ್ತಾರೆ ನಗರ ನಿವಾಸಿ ಮಂಜುನಾಥ ನಾಯ್ಕ. 

ಕೆಲವೆಡೆ ವಾಯುವಿಹಾರಕ್ಕೆ ಅನಿವಾರ್ಯವಾಗಿ ದುರವಸ್ತೆ ಇರುವ ಉದ್ಯಾನಕ್ಕೆ ಹೋಗುವ ಸ್ಥಿತಿಯಿದೆ. ಸಾಕಷ್ಟು ಬಾರಿ ನಗರಸಭೆಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ
-ವರದಾ ಹೆಗಡೆ, ಇಂದಿರಾನಗರ ನಿವಾಸಿ
ನಗರದಲ್ಲಿನ ಉದ್ಯಾನಗಳ ನಿರ್ವಹಣೆಯನ್ನು ಹಂತಹಂತವಾಗಿ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಎದುರಾಗಿದ್ದರೆ ಅಲ್ಲಿನ ಗಿಡಮರಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ನೀರು ನೀಡಲು ಕ್ರಮವಹಿಸಲಾಗುವುದು
-ಕಾಂತರಾಜ್, ಪೌರಾಯುಕ್ತ ಶಿರಸಿ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT