ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರು ಗ್ಯಾರಂಟಿ ಫಲಾನುಭವಿಗಳಲ್ಲವೇ?: ವೆಂಕಟೇಶ ಹೆಗಡೆ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಪ್ರಶ್ನೆ
Published 18 ಏಪ್ರಿಲ್ 2024, 12:29 IST
Last Updated 18 ಏಪ್ರಿಲ್ 2024, 12:29 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶಿರಸಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮೊದಲು ಬಿಜೆಪಿಗರು ಈ ಎಲ್ಲ ಯೋಜನೆಗಳ ಲಾಭ ಪಡೆಯುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿಕೊಳ್ಳಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಹೇಳಿದರು.

ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಫಲ ಯಾರಿಗೂ ಸರಿಯಾಗಿ ಸಿಗುತ್ತಿಲ್ಲ ಎಂದು ಕಾಗೇರಿ ಅವರು ತಮ್ಮ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಗ್ಯಾರಂಟಿ ಫಲ ಶೇ 90ರಷ್ಟು ಜನರಿಗೆ ಸಿಗುತ್ತಿದ್ದು, ಅದರಲ್ಲಿ ಬಿಜೆಪಿಗರ ಬಹುದೊಡ್ಡ ಕೊಡುಗೆಯೂ ಇದೆ. ಇಂಥ ಸನ್ನಿವೇಶದಲ್ಲಿ ಕಾಗೇರಿ ಅನಗತ್ಯವಾಗಿ ಕಾಂಗ್ರೆಸ್ ಯೋಜನೆ ಟೀಕಿಸುತ್ತಿದ್ದಾರೆ. ಸುಳ್ಳು ಹೇಳಿಕೆ ನೀಡುವುದನ್ನು ಕಾಗೇರಿ ಕೈಬಿಡಬೇಕು ಎಂದರು. 

ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಯೋಜನೆ ನನೆಗುದಿಗೆ ಬಿದ್ದಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ನಿರಂತರವಾಗಿದೆ. ಅರಣ್ಯ ಅತಿಕ್ರಮಣದಾರರ ಸಮಸ್ಯೆ ತೀವ್ರವಾಗಿದೆ. ಆಸಾಮಿ ಖಾತೆ ಸಾಲದ ಸಮಸ್ಯೆ ಹೆಚ್ಚಿದೆ. ಬೆಟ್ಟ ಭೂಮಿ ‘ಬ’ ಖರಾಬ್ ಸಮಸ್ಯೆ ಆರಂಭವಾಗಿದೆ. ಸ್ಥಳೀಯವಾಗಿ ಫಾರ್ಮ್ ನಂಬರ್ 3, ಇ ಸ್ವತ್ತು ಸಮಸ್ಯೆಗಳಿವೆ. ಬಿಜೆಪಿ ಅಧಿಕಾರಾವಧಿಯಲ್ಲಿ ಈ ಸಮಸ್ಯೆ ಏಕೆ ಬಗೆಹರಿಸಿಲ್ಲ? ಕಾಗೇರಿ ಅವರು ಅಧಿಕಾರದಲ್ಲಿದ್ದ ವೇಳೆ ಇವೆಲ್ಲ ಸಮಸ್ಯೆಗೂ ಪರಿಹಾರ ಸಾಧ್ಯವಿತ್ತಾದರೂ ಏಕೆ ಅದರ ಪರಿಹಾರಕ್ಕೆ ಮುಂದಾಗಲಿಲ್ಲ? ಎಂಬುದನ್ನು ಕಾಗೇರಿ ಬಹಿರಂಗಗೊಳಿಸಬೇಕು ಎಂದರು. 

ಈ ಹಿಂದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಾರ್ಗರೇಟ್ ಆಳ್ವಾ ಗೆಲುವು ದಾಖಲಿಸಿದ್ದರು. ಕಾಂಗ್ರೆ‍ಸ್‍ನಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. ಈಗಾಗಲೇ ಕೇಂದ್ರ ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ಕಚೇರಿಗೆ ತಲುಪಿದ್ದು, ಮತದಾರರ ಮನೆಮನೆಗೆ ತಲುಪಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದು ಹೇಳಿದರು. 

ಪಕ್ಷದ ಪ್ರಮುಖರಾದ ಜಗದೀಶ ಗೌಡ, ಗೀತಾ ಶೆಟ್ಟಿ, ಅಬ್ಬಾಸ್ ತೋನ್ಸೆ, ಜ್ಯೋತಿ ಗೌಡ, ರಮೇಶ ದುಭಾಶಿ, ದೀಪಕ್ ದೊಡ್ಡೂರು, ತಾರಾ ಮೇಸ್ತ, ಮಂಗಲ ಮೇಸ್ತ, ರಮ್ಯಾ ಚಂದಾವರ, ಖಾಸಿಂ ಸಾಬ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT