ಶಿರಸಿ: ತಾಲ್ಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಸೋಮವಾರ ರಾತ್ರಿ, ಮಂಗಳವಾರ ಇಡೀ ದಿನ ಉತ್ತಮ ಮಳೆಯಾಗಿದ್ದು, ಜಲಮೂಲಗಳು ಭರ್ತಿಯಾಗುತ್ತಿವೆ.
ವಾರದಿಂದೀಚೆ ಚುರುಕಾಗಿದ್ದ ಮಳೆ ಮಂಗಳವಾರ ಮತ್ತಷ್ಟು ಜೋರಾಗಿತ್ತು. ಇದರಿಂದ ಇಡೀ ದಿನ ಮಳೆ ಸುರಿಯಿತು. ಸೋಂದಾ, ಹುಲೇಕಲ್, ವಾನಳ್ಳಿ, ಸಾಲಕಣಿ ಭಾಗದಲ್ಲಿ ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಜೋರಾಗಿ ನಡೆಯಿತು.
ಭತ್ತ ಬೆಳೆಗಾರರು ಸಂಭ್ರಮದಿಂದ ನಾಟಿ ಕಾರ್ಯ ನಡೆಸಿದರು. ಇನ್ನೂ ಕೆಲ ಭಾಗದಲ್ಲಿ ರಭಸದ ಗಾಳಿಯೂ ಮಳೆಗೆ ಸಾಥ್ ನೀಡಿದ್ದು, ಚಿಕ್ಕಪುಟ್ಟ ಹಾನಿ ಸಂಭವಿಸಿದೆ. ನಗರ ಸಮೀಪದ ಪಟ್ಟನಮನೆ ಗ್ರಾಮದ ಮಹಮ್ಮದ್ ಅಲಿ ಅವರ ಅಡುಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ₹ 30 ಸಾವಿರ ಹಾನಿ ಅಂದಾಜಿಸಲಾಗಿದೆ. ಕಂದಾಯ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜೊಯಿಡಾ ವರದಿ
ಜೊಯಿಡಾ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.
ತಾಲ್ಲೂಕಿನಲ್ಲಿ 48 ಗಂಟೆಗಳಲ್ಲಿ 83 ಮಿಮೀ., ಮಳೆಯಾಗಿದ್ದು, ಅಣಶಿ, ಕ್ಯಾಸಲ್ ರಾಕ್, ಉಳವಿ, ಗುಂದ ಹಾಗೂ ತೇರಾಳಿ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ.
ತಾಲ್ಲೂಕಿನಲ್ಲಿ ಕುಡಿಯಲು ಹಾಗೂ ಕೃಷಿಗೆ ಝರಿಗಳೆ ನೀರಿನ ಮೂಲವಾಗಿದ್ದು ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಹರಿಯುತ್ತಿತ್ತು. ಆದರೆ ಈ ವರ್ಷ ಇನ್ನೂ ಝರಿಗಳು ಹರಿಯುತ್ತಿಲ್ಲ. ಹೀಗೆ ಗಾಳಿ ಸಹಿತ ಮಳೆ ಸುರಿದರೆ ಝರಿಗಳು ಹರಿಯಬಹುದು. ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಜೊಯಿಡಾದ ಹಿರಿಯ ಮಹಾದೇವ ಗಾವಡಾ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.