ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಪಿಎಂಶ್ರೀ ಶಾಲೆಗಳಲ್ಲಿ ‘ಎಲ್‍ಕೆಜಿ’ ಆರಂಭ

Published 1 ಜುಲೈ 2024, 5:56 IST
Last Updated 1 ಜುಲೈ 2024, 5:56 IST
ಅಕ್ಷರ ಗಾತ್ರ

ಶಿರಸಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್.ಕೆ.ಜಿ)  ಆರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ಪ್ರಕಾರ ಶಿರಸಿ ಶೈಕ್ಷಣಿಕ ಜಿಲ್ಲೆಯ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭವಾಗಿದೆ. 

2023-24ನೇ ಸಾಲಿನಲ್ಲಿ ಜಿಲ್ಲೆಯ ನಾಲ್ಕು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರಿ ಆದೇಶ ಆಗದ ಕಾರಣ ಕಳೆದ ವರ್ಷ ಸರ್ಕಾರದ ಪ್ರಯತ್ನ ನನೆಗುದಿಗೆ ಬಿದ್ದಿತ್ತು. ಈ ವರ್ಷ ಶತಾಯಗತಾಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವಂತೆ ಜ್ಞಾಪನ ಪತ್ರ ಹೊರಡಿಸಿರುವ ಇಲಾಖೆಯು, ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳೆಯ 4 ಮತ್ತು ಹೊಸ 6 ಸೇರಿ ಒಟ್ಟು 10 ಶಾಲೆಗಳನ್ನು ಈ ಪಟ್ಟಿಗೆ ಸೇರಿಸಿದೆ.

ಪಿಎಂಶ್ರೀ ಶಾಲೆಗಳಾದ ಶಿರಸಿಯ ಕೆ.ಎಚ್.ಬಿ. ಕಾಲೊನಿ ಶಾಲೆ, ಹಳಿಯಾಳದ ಬಿಕೆ ಹಳ್ಳಿ ಶಾಲೆ, ಕೋಗಿಲಬನ ಶಾಲೆ, ಜೊಯಿಡಾಡ ಜಿ.ಎಚ್.ಪಿ. ಶಾಲೆ, ಬನವಾಸಿಯ ಎಂ.ಎಚ್.ಪಿ. ಶಾಲೆ, ಹಳಿಯಾಳದ ಮಂಗಳವಾಡ ಶಾಲೆ, ಸಿದ್ದಾಪುರದ ಕೋಲಸಿರ್ಸಿ ಹಾಗೂ ಹಾಳದಕಟ್ಟಾ ಶಾಲೆ, ಯಲ್ಲಾಪುರ ಉರ್ದು ಶಾಲೆ, ಮುಂಡಗೋಡದ ಚಿಗಳ್ಳಿ ಶಾಲೆಗಳಲ್ಲಿ ಎಲ್.ಕೆ.ಜಿ ಆರಂಭಿಸಲಾಗಿದೆ. 

ಪ್ರಸಕ್ತ ವರ್ಷ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿ ತರಗತಿ ಆರಂಭಿಸಿ, ಇದಕ್ಕೆ 4ರಿಂದ 5 ವರ್ಷದೊಳಗಿನ ಕನಿಷ್ಠ 20ರಿಂದ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಅಲ್ಲದೆ, ಪೂರ್ವ ಪ್ರಾಥಮಿಕ ಎಲ್‌ಕೆಜಿ ತರಗತಿ ನಡೆಸಲು ಕೊಠಡಿ ಗುರುತಿಸಿ, ಅದನ್ನು ಸ್ಥಳೀಯ ಚಿತ್ರಕಲಾ ಶಿಕ್ಷಕರನ್ನು ಮತ್ತು ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾಗುವಂತೆ ಚಿತ್ರ ಬರೆಯಿಸುವುದಲ್ಲದೇ, ಮಕ್ಕಳು ಚಿತ್ರ ರಚಿಸಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ್ ಅಥವಾ ಬ್ಲಾಕ್ ಬೋರ್ಡ್ ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯ ಶಿಕ್ಷಣ ಇಲಾಖೆ ಡಿಡಿಪಿಐಗೆ ಸೂಚನೆ ನೀಡಿದ್ದು, ಆ ಪ್ರಕಾರ ಶೈಕ್ಷಣಿಕ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. 

‘ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕ ಮತ್ತು ಒಬ್ಬ ಆಯಾ 10 ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಿರುವ ಇಲಾಖೆ, ಅತಿಥಿ ಶಿಕ್ಷಕರಿಗೆ ₹10 ಸಾವಿರ, ಆಯಾಗಳಿಗೆ ₹5 ಸಾವಿರ ಸಂಭಾವನೆ ನಿಗದಿ ಪಡಿಸಿದೆ. ಶಿಕ್ಷಕ ವೃತ್ತಿ ಸೇರಬಯಸುವವರು ಪೂರ್ವ ಪ್ರಾಥಮಿಕ ತರಗತಿ ಶಿಕ್ಷಣದಲ್ಲಿ ಕನಿಷ್ಠ 50 ಅಂಕ ಪಡೆದು ಪಾಸ್ ಆಗಬೇಕು. ಇಲ್ಲವೇ ಎನ್‌ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೊಮಾ ಇನ್ ನರ್ಸರಿ ಟೀಚರ್ಸ್ ಎಜುಕೇಷನ್ ಪಡೆದಿರಬೇಕೆಂಬ ಅರ್ಹತೆ ನಿಗದಿ ಪಡಿಸಿದೆ. ಎಲ್‌ ಕೆಜಿ ತರಗತಿಯನ್ನು ಬೆಳಗ್ಗೆ 10ರಿಂದ 3.30ರ ವರೆಗೆ ನಡೆಸಬೇಕು. ಮಕ್ಕಳಿಗೆ ಅಂಗನವಾಡಿಗಳಲ್ಲಿ ನೀಡುವ ಆಹಾರ ಘಟಕ ವೆಚ್ಚದಂತೆ ಹಾಲು, ಉಪಾಹಾರ ಮತ್ತು ಊಟ ನೀಡಬೇಕೆಂದು ಇಲಾಖೆ ಸೂಚಿಸಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು. 

ಪ್ರಸಕ್ತ ಸಾಲಿನಿಂದ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಿಸುವಂತೆ ಇಲಾಖೆ ಸೂಚನೆ ನೀಡಿದ್ದು ಇದಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳುವಂತೆ ಎಲ್ಲಾ ಬಿಇಒಗಳಿಗೂ ನಿರ್ದೇಶನ ನೀಡಲಾಗಿದೆ. ಪೂರ್ವ ಪ್ರಾಥಮಿಕ ತರಗತಿಗೆ ಮಕ್ಕಳ ದಾಖಲಾತಿ ಆರಂಭವಾಗಿದೆ
ಪಿ.ಬಸವರಾಜ್ ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT