ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದ ಕಾಗೇರಿ ಮನವಿಗೆ ರೈಲ್ವೆ ಸಚಿವರ ಸ್ಪಂದನೆ

Published 25 ಜೂನ್ 2024, 15:32 IST
Last Updated 25 ಜೂನ್ 2024, 15:32 IST
ಅಕ್ಷರ ಗಾತ್ರ

ಶಿರಸಿ: ವಾರಕರಿ ಸಂಪ್ರದಾಯದವರು ಪಂಡರಾಪುರ ವಾರಿ ಆಚರಣೆ ಹಿನ್ನೆಲೆಯಲ್ಲಿ ಪಂಡರಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಕಾರಣ ಯಶವಂತಪುರ -ಪಂಡರಾಪುರ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ-16541) ವಾರಕ್ಕೊಮ್ಮೆ ಬದಲಾಗಿ ಜೂನ್ 25ರಿಂದ ಜುಲೈ 30ರವರೆಗೆ ಪ್ರತಿ ನಿತ್ಯ ಸಂಚರಿಸುವಂತೆ ಮಾಡಬೇಕು ಎನ್ನುವ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತ ಆದೇಶ ನೀಡಿ ಸ್ಪಂದಿಸಿದ್ದಾರೆ ಎಂದು ಉತ್ತರ ಕನ್ನಡ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ. 

ನವದೆಹಲಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದು, ಜೂನ್ 25ರಿಂದ ಜುಲೈ 30ರವರೆಗೆ ರೈಲು ಪ್ರತಿ ದಿನ ಚಲಿಸಿದರೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನಿತ್ಯ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿದರು. 

ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಈ ಬಗ್ಗೆ ಕೂಡಲೆ ಅಧಿಕಾರಿಗಳ ಜತೆ ಮಾತನಾಡಿ, ಬೆಂಗಳೂರಿನಿಂದ ಜೂನ್ 26, 28, 29 ಹಾಗೂ 30ರಂದು ಪಂಡರಾಪುರಕ್ಕೆ ವಿಶೇಷ ರೈಲು ಪ್ರಯಾಣಿಸಲಿದೆ ಎಂಬ ಭರವಸೆ ನೀಡಿ, ಅಧಿಕೃತ ಪ್ರಕಟಣೆ ಹೊರಡಿಸಿದರು. ಈ ಮೊದಲು ನಿಟ್ಟೂರಿನ ರಮೇಶ್ ನಾರ್ವೇಕರ್ ಮತ್ತು ಖಾನಾಪುರದ ಶಾಂತಾರಾಮ ಹೆಬ್ಬಾಳ್ಕರ್ ಅವರು, ಹುಬ್ಬಳ್ಳಿಯಿಂದ ಪಂಡರಾಪುರಕ್ಕೆ ರೈಲು ಸೇವೆಯ ಸಮಸ್ಯೆಯ ಕುರಿತು ವಾರಕರಿಯ ಸಂಪ್ರದಾಯದ ಜನರ ಪರವಾಗಿ ಕಾಗೇರಿಗೆ ಮನವಿ ಸಲ್ಲಿಸಿದ್ದರು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT