ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಹೊಸ ಜಲ ಶುದ್ಧೀಕರಣ ಘಟಕಕ್ಕೆ ಹೆಚ್ಚಿದ ಬೇಡಿಕೆ

60 ವರ್ಷ ಪೂರೈಸಿದ ಘಟಕ ಸ್ಥಗಿತಗೊಳಿಸಲು ಒತ್ತಾಯ
Published 8 ಜುಲೈ 2024, 5:00 IST
Last Updated 8 ಜುಲೈ 2024, 5:00 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಕೆಂಗ್ರೆ ಜಲಮೂಲದಿಂದ ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರನ್ನು ಶುದ್ಧೀಕರಿಸುವ ‘ಜಲ ಶುದ್ಧೀಕರಣ ಘಟಕ’ ತುಂಬ ಹಳೆಯದಾಗಿದ್ದು, ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ.

ನಗರಕ್ಕೆ ಆರಂಭದಿಂದಲೂ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ಸಮೀಪದ ಕೆಂಗ್ರೆ ಜಾಕ್‍ವೆಲ್‍ನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇಲ್ಲಿಂದ ಬರುವ ನೀರನ್ನು ಶುದ್ಧೀಕರಿಸಲು ಲೋಕೋಪಯೋಗಿ ಇಲಾಖೆ ವಿಶ್ರಾಂತಿ ಮಂದಿರದ ಸಮೀಪ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ನೀರು ಶುದ್ಧಗೊಂಡ ನಂತರ ನಗರದ ಶೇ 40-50 ಭಾಗಕ್ಕೆ ಇದೇ ಘಟಕದಿಂದ ಪೂರೈಸಲಾಗುತ್ತಿದೆ. ಆದರೆ ಈ ಘಟಕಕ್ಕೆ 60 ವರ್ಷ ಮೇಲ್ಪಟ್ಟಿದ್ದು, ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ನೂತನ ಘಟಕ ನಿರ್ಮಿಸಬೇಕು ಎಂದು ಸಾರ್ವಜನಿಕರ ಒತ್ತಾಯ ಹೆಚ್ಚಿದೆ. 

‘1960ರ ದಶಕದಲ್ಲಿ ಜಲ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಈಗ ಅದರ ಸಾಮರ್ಥ್ಯ ಕುಗ್ಗಿದ್ದು, ನೀರು ಸಮರ್ಪಕವಾಗಿ ಶುದ್ಧವಾಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಹೆಚ್ಚಿನ ಸಾಮರ್ಥ್ಯದ ಹೊಸ ಪಂಪ್‍ಗಳನ್ನು ಕೆಂಗ್ರೆ ಜಾಕ್‍ವೆಲ್‍ನಲ್ಲಿ ಅಳವಡಿಸಿದ್ದು, ನೀರು ಬರುವ ಒತ್ತಡ ಕೂಡ ಹೆಚ್ಚಿದೆ. ಇದರಿಂದ ಘಟಕದ ಧಾರಣ ಸಾಮರ್ಥ್ಯ ಕೂಡ ಹೆಚ್ಚುವ ಅಗತ್ಯವಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಶ್ರೀಕಾಂತ ತಾರಿಬಾಗಿಲು.

ಹೊಸದಾದ ಜಲ ಶುದ್ಧೀಕರಣ ಘಟಕದ ಅವಶ್ಯಕತೆಯಿದೆ. ಹೊಸ ಘಟಕ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಕಾಂತರಾಜ್, ಪೌರಾಯುಕ್ತ

‘15 ವರ್ಷದ ಹಿಂದೆ ಮಾರಿಗದ್ದೆಯಿಂದ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದಾಗಲೂ ಅಲ್ಲಿಂದಲೂ ಈ ಹಳೆಯ ಶುದ್ದೀಕರಣ ಘಟಕಕ್ಕೆ ಸಂಪರ್ಕ ನೀಡಲಾಯಿತು. ನಾಲ್ಕು ವರ್ಷಗಳ ಹಿಂದೆ ಜಲ ಶುದ್ದೀಕರಣ ಘಟಕದ ತನಕ ಹೊಸ ಪೈಪ್‍ಲೈನ್ ಹಾಕಲಾಗಿದೆ ಹೊರತು ಹೊಸ ಘಟಕ ಸ್ಥಾಪಿಸುವ ವಿಷಯವೇ ಮುನ್ನೆಲೆಗೆ ಬಂದಿಲ್ಲ. ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಗರಕ್ಕೆ ನಿರಂತರ ನೀರು ಪೂರೈಸಲು ಈಗ ಮತ್ತೆ ₹60 ಕೋಟಿ ಯೋಜನೆಗೆ ಸಿದ್ದತೆ ನಡೆದಿದೆ. ಅದರಲ್ಲೂ ಜಲ ಶುದ್ದೀಕರಣ ಘಟಕ ಬದಲಾವಣೆ ವಿಷಯ ಸೇರಿಲ್ಲ. ₹100 ಕೋಟಿ ನೀರಿನ ಯೋಜನೆ ಮಾಡಿದರೂ, ಜಲಶುದ್ದೀಕರಣ ಘಟಕ ಮಾಡದೇ ಹೋದರೆ ಯೋಜನೆ ಸಾರ್ಥಕತೆ ಕಾಣುವುದಿಲ್ಲ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT