ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಜೀವಜಲದ ಕೊರತೆ ನೀಗಿಸಿದ ಒಡ್ಡು

ಭಟ್ಕಳದ ಮಣ್ಕುಳಿಯಲ್ಲಿ ಸರ್ಕಾರದ ನೆರವಿಗೆ ಕಾಯದೇ ಅಂತರ್ಜಲ ವೃದ್ಧಿಸಿದ ಯುವಕರು
Last Updated 11 ಜನವರಿ 2022, 19:45 IST
ಅಕ್ಷರ ಗಾತ್ರ

ಭಟ್ಕಳ: ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯವನ್ನು ಮಣ್ಕುಳಿಯ ಯುವಕರು ಸತತ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿ, ಮಣ್ಕುಳಿಯ ಮಾರುತಿನಗರ ನಿವಾಸಿಗಳ ಕುಡಿಯುವ ನೀರಿನ ಬವಣೆ ನೀಗಿದೆ.

ತಲಾಂದ ಗ್ರಾಮದಿಂದ ಹರಿದು ಬಂದು ಮುಟ್ಟಳ್ಳಿಯ ಮೂಲಕ ಚೌಥನಿ ಶರಾಬಿ ನದಿಗೆ ನಾಗಮಾಸ್ತಿ ಹೊಳೆ ಸೇರುತ್ತದೆ. ಈ ಭಾಗದಲ್ಲಿ ಬೇಸಿಗೆಯಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಎಂದೂ ಕುಡಿಯುವ ನೀರಿನ ಕೊರತೆ ಕಾಡಿರಲಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಇಲ್ಲಿನ ಬಾವಿಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತವಾಗಿತ್ತು. ಹಾಗಾಗಿ ಜನ ನೀರಿಗಾಗಿ ಪರದಾಡುವಂತಾಗಿತ್ತು.

ಸಮಸ್ಯೆಯ ಗಂಭೀರತೆ ಅರಿತ ಸಮಾನ ಮನಸ್ಕರು ಸಭೆ ಸೇರಿದರು. ಅಂತರ್ಜಲ ಮಟ್ಟ ಕುಸಿತದ ಕಾರಣ ಹುಡುಕಲು ಹೊರಟರು. ಆಗ, ಬೇಸಿಗೆಯಲ್ಲಿ ನದಿಯಲ್ಲಿ ನೀರು ನಿಲ್ಲದೇ ಹರಿದು ಹೋಗುತ್ತಿರುವುದನ್ನು ಗಮನಿಸಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಯುವಕರು, ಸರ್ಕಾರದ ನೆರವಿಗೆ ಕಾಯದೇ ಸ್ವಂತ ಖರ್ಚಿನಲ್ಲಿ ಹಲಗೆಗಳನ್ನು ಖರೀದಿಸಿದರು. ನದಿಗೆ ಅಡ್ಡಲಾಗಿ ಹಾಕಿ ನೀರು ನಿಲ್ಲುವಂತೆ ಮಾಡಿದರು. ಜೊತೆಗೇ ನದಿಯಲ್ಲಿದ್ದ ಹೂಳನ್ನು ಎತ್ತಿ ಮತ್ತಷ್ಟು ನೀರು ಸಂಗ್ರಹವಾಗಲು ಅನುವು ಮಾಡಿಕೊಟ್ಟರು. ಇದರ ಫಲವಾಗಿ ನಾಲ್ಕು ವರ್ಷಗಳಿಂದ ಬೇಸಿಗೆಯಲ್ಲಿ ಜೀವಜಲದ ಕೊರತೆ ಕಾಡಿಲ್ಲ.

ಈ ಹಿಂದೆ ತಾಲ್ಲೂಕಿನಲ್ಲಿ ಭತ್ತದ ಕೊಯ್ಲಿನ ನಂತರ ಕೃಷಿ ಭೂಮಿಗಳಲ್ಲಿ ಶೇಂಗಾ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಿತ್ತುತ್ತಿದ್ದರು. ಆಗ ಕೃಷಿಯ ಸಲುವಾಗಿ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಗದ್ದೆಗೆ ನೀರು ಹರಿಸುತ್ತಿದ್ದರು. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತಿತ್ತು. ಈಗ ಬಹುತೇಕ ಕೃಷಿ ಭೂಮಿಗಳಲ್ಲಿ ಮಳೆಗಾಲ ಭತ್ತದ ಬೇಸಾಯ ಮಾಡಿ ಬೇಸಿಗೆಯಲ್ಲಿ ಪಾಳು ಬಿಡಲಾಗುತ್ತದೆ. ಹಾಗಾಗಿ ನದಿಗೆ ಒಡ್ಡು ಕಟ್ಟುವುದೂ ನಿಂತಿದೆ.

ಮಣ್ಕುಳಿ, ಮಾರುತಿನಗರದ ನಿವಾಸಿಗಳ ಯಶಸ್ಸಿನಿಂದ ಮುಟ್ಟಳ್ಳಿ, ತಲಾಂದ, ಚೌಥನಿ ಸೇರಿದಂತೆ ಹಲವು ಭಾಗಗಳಲ್ಲೂ ಜನ ಪ್ರೇರಿತರಾಗಿದ್ದಾರೆ. ಪ್ರತಿವರ್ಷ ಡಿಸೆಂಬರ್, ಜನವರಿಯಲ್ಲಿ ಒಡ್ಡು ನಿರ್ಮಿಸುತ್ತಿದ್ದಾರೆ. ತಮ್ಮ ಭಾಗದಲ್ಲಿ ನೀರಿನ ಕೊರತೆ ನೀಗಿಸಿಕೊಳ್ಳುತ್ತಿದ್ದಾರೆ.

ಗ್ರಾಮಸ್ಥರಿಗೆ ಅರಿವು:

‘ನಾಲ್ಕು ವರ್ಷಗಳ ಹಿಂದೆ ಮಣ್ಕುಳಿಯಲ್ಲಿ ನೀರಿನ ಕೊರತೆ ಕಾಡಿತು. ಸಮಸ್ಯೆಯ ಮೂಲ ಹುಡುಕಿದಾಗ ನದಿಯಲ್ಲಿ ಹೂಳು ತುಂಬಿದ್ದು ಕಂಡುಬಂತು. ನದಿಗೆ ಒಡ್ಡು ನಿರ್ಮಿಸದಿರುವುದು ಅಂತರ್ಜಲದ ಕುಸಿತಕ್ಕೆ ಮೂಲ ಕಾರಣವಾಗಿತ್ತು. ಊರಿನ ಜನರ ಸಹಕಾರದಿಂದ ಪ್ರತಿವರ್ಷ ಒಡ್ಡು ನಿರ್ಮಿಸಲಾಗುತ್ತಿದೆ. ಅಂದಿನಿಂದ ನೀರಿನ ಕೊರತೆಯಾಗಿಲ್ಲ. ಇದು ಇತರರಿಗೂ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಎಲ್ಲಾ ಗ್ರಾಮಸ್ಥರಿಗೂ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ಮಣ್ಕುಳಿಯ ನಿವಾಸಿ ಸತೀಶ ಕುಮಾರ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT