ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಸೂರ್ಯಮಿತ್ರ: ಸೋಲಾರ್ ವಿದ್ಯುತ್ ಸಂಪರ್ಕಕ್ಕೆ ಜಾರಿಗೊಂಡ ಯೋಜನೆ

Published : 12 ಸೆಪ್ಟೆಂಬರ್ 2024, 6:30 IST
Last Updated : 12 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments

ಶಿರಸಿ: ಸೂರ್ಯಮಿತ್ರ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ರೈತರಿಂದ ನಿಧಾನವಾಗಿ ಆಸಕ್ತಿ ಹೆಚ್ಚಿದ್ದು, ಹೆಸ್ಕಾಂ ಶಿರಸಿ ವಿಭಾಗದಲ್ಲಿ 36 ರೈತರು ನೋಂದಾವಣೆ ಆಗಿದ್ದಾರೆ. 

ಗಿಡಮರಗಳಿಂದ ತುಂಬಿರುವ  ಮಲೆನಾಡಿನ ಪ್ರದೇಶದಲ್ಲಿ ಸೌರ ಪಂಪ್‌ಸೆಟ್‌ಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ ಎಂಬ ಗೊಂದಲದಲ್ಲಿ ಆರಂಭದ ಮೂರು, ನಾಲ್ಕು ತಿಂಗಳಲ್ಲಿ ಕೇವಲ ಐದು ಅರ್ಜಿಗಳು ಮಾತ್ರ  ಸಲ್ಲಿಕೆಯಾಗಿದ್ದವು. ನಂತರ ಹೆಸ್ಕಾಂ ಅಧಿಕಾರಿಗಳು ಪಂಪ್‍ಸೆಟ್ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಿದ ಬೆನ್ನಿಗೆ 36ರಷ್ಟು ರೈತರು ಸೋಲಾರ್ ಪಂಪ್ ಅಳವಡಿಕೆಗೆ ಮುಂದಾಗಿದ್ದಾರೆ. 

2024ರ ಮಾರ್ಚ್‌ ತಿಂಗಳಲ್ಲಿ ಸೂರ್ಯಮಿತ್ರ ಯೋಜನೆ ಜಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆ ಇದಾಗಿದ್ದು, ರೈತರು 10 ಎಚ್‌ಪಿವರೆಗೆ ಐಪಿ ಸೆಟ್‌ಗಳಿಗೆ ಸೌರ ವಿದ್ಯುತ್‌ ಸಂಪರ್ಕ ಹೊಂದಬಹುದಾಗಿದೆ. ಎಲ್‍ಟಿ ಮತ್ತು ಎಚ್‍ಟಿ ಲೈನ್ ಮಾರ್ಗದ 500 ಮೀಟರ್‍ಗಿಂತ ಹೆಚ್ಚಿನ ದೂರದಲ್ಲಿ ಐಪಿ ಸೆಟ್ ಇದ್ದರೆ ಅಂಥವರಿಗೆ ನೇರವಾಗಿ ವಿದ್ಯುತ್ ಸಂಪರ್ಕ ನೀಡಬಾರದು. ಕಡ್ಡಾಯವಾಗಿ ಸೂರ್ಯಮಿತ್ರ ಯೋಜನೆಯಡಿ ಸೋಲಾರ್ ಸೌಲಭ್ಯ ಕಲ್ಪಿಸಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ಶಿರಸಿ ವೃತ್ತದಲ್ಲಿ 500 ಮೀಟರ್‍ಗಿಂತ ಹೆಚ್ಚಿನ ದೂರದಲ್ಲಿ ಐಪಿ ಸೆಟ್ ಇರುವ 210 ಮಂದಿ ರೈತರನ್ನು ಹೆಸ್ಕಾಂನಿಂದ ಈಗಾಗಲೇ ಗುರುತಿಸಲಾಗಿದೆ. ಇವರಲ್ಲಿ ಪ್ರಸ್ತುತ 36 ರೈತರು ಸೂರ್ಯಮಿತ್ರ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಉಳಿದ ಕೆಲವರು ಉತ್ಸುಕತೆ ತೋರುತ್ತಿದ್ದಾರೆ. 

'ಸೋಲಾರ್ ಪಂಪ್‌ಸೆಟ್ ಬೇಕೆಂದು 36 ರೈತರು ಈಗಾಗಲೇ ಸೂರ್ಯಮಿತ್ರ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಆನ್‌ಲೈನ್ ವರದಿ ನೀಡಿದ್ದಾರೆ. ಪ್ರಸ್ತುತ ರೈತರು ನೋಂದಾಯಿತ ಕಂಪನಿಯ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕಂಪನಿಯಿಂದ ಸೋಲಾರ್ ಪಂಪ್ ಸೆಟ್ ಅಳವಡಿಸಿದ ನಂತರ ರೈತರಿಗೆ ಸಹಾಯಧನ ಜಮೆಯಾಗುತ್ತದೆ. ಒಂದು ಎಚ್‍ಪಿ ಬೆಲೆ ₹1 ಲಕ್ಷ. ಇದರಲ್ಲಿ ಶೇ.50ರಷ್ಟು ರಾಜ್ಯ ಸರ್ಕಾರ, ಶೇ.30ರಷ್ಟು ಕೇಂದ್ರ ಸರ್ಕಾರ ಹಾಗೂ ಉಳಿದ ಮೊತ್ತವನ್ನು ರೈತರು ಭರಿಸುತ್ತಿದ್ದಾರೆ' ಎಂದು ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

'ಸೂರ್ಯಮಿತ್ರ ನೈಸರ್ಗಿಕ ವಿದ್ಯುತ್‌ ಬಳಕೆಯ ಜತೆಯಲ್ಲಿ ಪರಿಸರ ಸ್ನೇಹಿ ಯೋಜನೆಯಾಗಿದೆ. ಇದರಿಂದ ವಿದ್ಯುತ್‌ ಅವಲಂಬನೆ ಕಡಿಮೆಯಾಗುತ್ತದೆ. ಮಲೆನಾಡಿನಲ್ಲಿ ಇದಕ್ಕೆ ಯಾವುದೇ ಸಮಸ್ಯೆಯಿಲ್ಲ. ಈಗಿನ ಸೋಲಾರ್‌ ಪ್ಯಾನಲ್‌ ಒಳ್ಳೆಯ ಸಾಮರ್ಥ್ಯ ಹೊಂದಿದ್ದು, ಸ್ವಲ್ಪ ಬಿಸಿಲಿದ್ದರೂ ಕೆಲಸ ಮಾಡುವಂತಿವೆ' ಎಂಬುದು ಯೋಜನೆಯಡಿ ಸೋಲಾರ್ ಸೌಲಭ್ಯ ಅಳವಡಿಸಿಕೊಳ್ಳುತ್ತಿರುವ ಶಿರಸಿಯ ಆದರ್ಶ ಗೌಡ ಅವರ ಮಾತಾಗಿದೆ. 

ಈಗೀಗ ರೈತರು ಸೋಲಾರ್ ಪಂಪ್ ಅಳವಡಿಕೆಗೆ ಆಸಕ್ತಿ ತೋರುತ್ತಿದ್ದು ಮಳೆಗಾಲದ ನಂತರ ಇನ್ನಷ್ಟು ಅರ್ಜಿಗಳು ಬರುವ ನಿರೀಕ್ಷೆಯಿದೆ.
ದೀಪಕ್ ಕಾಮತ್ ಅಧೀಕ್ಷಕ ಎಂಜಿನೀಯರ್ ಹೆಸ್ಕಾಂ ಶಿರಸಿ ವೃತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT