ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ :ಕೇರಳ ಲಾರಿಯ ಬಿಡಿಭಾಗ ಪತ್ತೆ

Published 14 ಆಗಸ್ಟ್ 2024, 2:04 IST
Last Updated 14 ಆಗಸ್ಟ್ 2024, 2:04 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದ ವೇಳೆ ಕಾಣೆಯಾಗಿದ್ದ ಕೇರಳದ ಲಾರಿಯ ಬಿಡಿಭಾಗವೊಂದು ಮಂಗಳವಾರ ಮುಳುಗು ತಜ್ಞ ಈಶ್ವರ ಮಲ್ಪೆ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.

ಜುಲೈ 16ರಂದು ಕಾಣೆಯಾದ ಲಾರಿಯು ಗಂಗಾವಳಿ ನದಿಯಲ್ಲಿ ಸಿಲುಕಿರುವ ಬಗ್ಗೆ ಡ್ರೋನ್ ತಂತ್ರಜ್ಞನ ಆಧಾರಿತ ಶೋಧನ ಯಂತ್ರದಿಂದ ಗೊತ್ತಾಗಿತ್ತು. ಲಾರಿ ಪತ್ತೆಗೆ ನದಿಯ ರಭಸ ಅಡ್ಡಿಯಾಗಿತ್ತು. ದುರ್ಘಟನೆ ನಡೆದು 28 ದಿನಗಳ ಬಳಿಕ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕಾರಣ ಈಶ್ವರ ಅವರಿಗೆ ಕಾರ್ಯಾಚರಣೆ ಸಾಧ್ಯವಾಯಿತು.

ನೀರಿನ ಹರಿವು ರಭಸವಿರುವ ಕಾರಣ ಜಿಲ್ಲಾಡಳಿತವು ಕಾರ್ಯಾಚರಣೆಗೆ ಅನುಮತಿ ನೀಡಿರಲಿಲ್ಲ. ಸ್ಥಳಿಯ ಶಾಸಕ ಸತೀಶ ಸೈಲ್ ಮನವಿಗೆ ಸ್ಪಂದಿಸಿ, ನಂತರ ಅನುಮತಿ ನೀಡಿತು. ನದಿಯಲ್ಲಿ ಮುಳುಗಿದ ಈಶ್ವರ್ ಅವರು ಲಾರಿಯ ಜಾಕ್‍ನ್ನು ಪತ್ತೆ ಮಾಡಿ, ಹೊರತೆಗೆದಿದ್ದಾರೆ. ಇದು ತಮ್ಮದೇ ಲಾರಿಯ ಬಿಡಿಭಾಗ ಎಂದು ಮಾಲೀಕ ಮುಬಿನ್ ಖಚಿತಪಡಿಸಿದ್ದಾರೆ. ಇದಲ್ಲದೆ ನದಿಯಲ್ಲಿ ಮುಳುಗಿರುವ ಗ್ಯಾಸ್ ಟ್ಯಾಂಕರ್‌ ಕ್ಯಾಬಿನ್‍ ಭಾಗದ ತುಣುಕನ್ನು ಪತ್ತೆ ಮಾಡಿದ್ದಾರೆ.

‘ಬಿಡಿಭಾಗ ಸಿಕ್ಕಿರುವುದರಿಂದ ನದಿಯಲ್ಲಿ ಲಾರಿ ಸಿಲುಕಿರುವುದು ಖಚಿತವಾಗಿದೆ. ನದಿಯ ರಭಸ ಕಡಿಮೆಯಾದ ಬಳಿಕ ಲಾರಿ ಹೊರತೆಗೆಯಲು ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು’ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.

ಐ.ಆರ್.ಬಿ ಕಂಪನಿ ನಿರ್ದೇಶಕರ ತನಿಖೆಗೆ ಆದೇಶ:

ಶಿರೂರು ಗುಡ್ಡ ಕುಸಿತ ದುರಂತದ ಘಟನೆ ಸಂಬಂಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿ ಎಂಟು ಮಂದಿ ನಿರ್ದೇಶಕರ ತನಿಖೆ ನಡೆಸಿ ಒಂದು ತಿಂಗಳಿನಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಅಂಕೋಲಾದ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ.

‘ಗುಡ್ಡ ಕುಸಿದು ಎಂಟು ಮಂದಿ ಮೃತಪಟ್ಟು, ಮೂರು ಮಂದಿ ಕಾಣೆಯಾಗಲು ಕಂಪನಿಯ ನಿರ್ಲಕ್ಷ್ಯ ಕಾರಣ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಂಪನಿಯ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 175 (3) ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಅಂಕೋಲಾ ಠಾಣೆ ಪೊಲೀಸರಿಗೆ ಸೂಚಿಸಿ, ಸೆಪ್ಟೆಂಬರ್ 13ಕ್ಕೆ ವಿಚಾರಣೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT