ಕಾರವಾರ: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟದಲ್ಲೊಂದಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರದಿಂದ ಆರಂಭಗೊಳ್ಳುತ್ತಿದ್ದು ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಗಮ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 44 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. 9652 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 37 ಕೇಂದ್ರಗಳನ್ನು ತೆರೆಯಲಾಗಿದ್ದು 10,102 ಮಕ್ಕಳು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪರೀಕ್ಷೆ ಕೇಂದ್ರಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಜ್ಜುಗೊಳಿಸಿದ್ದಾರೆ.
ಕೇಂದ್ರಗಳ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ಹಾವಳಿ ತಡೆಗೆ ವಿಶೇಷ ವಿಚಕ್ಷಣ ದಳ ನಿಯೋಜಿಸಲಾಗಿದೆ. ಗೊಂದಲಗಳು ಉಂಟಾಗದಂತೆ ಮತ್ತು ಸುಗಮ ರೀತಿಯಲ್ಲಿ ಪರೀಕ್ಷೆ ನಡೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಇನ್ನಿತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಚಕ್ಷಣ ದಳ ನಿಯೋಜಿಸಲಾಗಿದೆ. ಎರಡು ದಿನಗಳ ಹಿಂದೆಯೇ ಪ್ರಶ್ನೆ ಪತ್ರಿಕೆಗಳು ಜಿಲ್ಲೆಗೆ ತಲುಪಿದ್ದು ಆಯಾ ತಾಲ್ಲೂಕಿನ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ.
‘ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಒತ್ತಡ ಸೃಷ್ಟಿಯಾಗದಂತೆ ಮುಂಚಿತವಾಗಿ ಆಯಾ ಶಾಲೆಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಅಂಕ ಗಳಿಕೆಯ ಹಿತದೃಷ್ಟಿಯಿಂದ ಮಕ್ಕಳಿಗೆ ವಿಶೇಷ ತರಬೇತಿ, ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ.ಬಸವರಾಜ್ ತಿಳಿಸಿದ್ದಾರೆ.
‘ಕಲಿಕಾ ಸಾಮರ್ಥ್ಯ ಆಧರಿಸಿ ವಿದ್ಯಾರ್ಥಿಗಳ ಗುಂಪು ರಚಿಸಿ ಕಲಿಕಾ ವೇಳಾ ಪಟ್ಟಿ ಸಿದ್ಧಪಡಿಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರಳ ಪಾಠದ ಮೂಲಕ ವಿಷಯ ಮನವರಿಕೆ ಮಾಡಿಕೊಡಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕಲಿಕೆ ಸಾಮರ್ಥ್ಯ ಪರಿಶೀಲಿಸುವಂತೆ ನೋಡಿಕೊಳ್ಳಲಾಗಿದೆ. ಕಳೆದ ಬಾರಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯಿಸಿ ಅವರಿಂದ ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯ ಬಗ್ಗೆ ಸಲಹೆ ಕೊಡಿಸುವ ಕೆಲಸವೂ ನಡೆದಿದೆ. ಕಳೆದ ಬಾರಿಗಿಂತ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ’ ಎಂದು ವಿವರಿಸಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ
ತಾಲ್ಲೂಕು;ವಿದ್ಯಾರ್ಥಿಗಳು;ಪರೀಕ್ಷೆಗಳ ಸಂಖ್ಯೆ
ಕಾರವಾರ;1889;12
ಅಂಕೋಲಾ;1269;06
ಕುಮಟಾ;2178;07
ಹೊನ್ನಾವರ;1990;09
ಭಟ್ಕಳ;2326;10
ಶಿರಸಿ;2692;10
ಸಿದ್ದಾಪುರ;1253;07
ಯಲ್ಲಾಪುರ;1033;06
ಮುಂಡಗೋಡ;1421;04
ಹಳಿಯಾಳ;2916;07
ಜೋಯಿಡಾ;787;03
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.