ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಬೆಳಕು ಬೀರದ ಬೀದಿದೀಪ

Published 6 ಫೆಬ್ರುವರಿ 2024, 5:01 IST
Last Updated 6 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದಲ್ಲಿ ಬೀದಿದೀಪ ಅಳವಡಿಕೆ ಮಾಡಿದವರು ನಿರ್ವಹಣೆ ಮಾಡಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಕಾಮಗಾರಿ ಮುಗಿದ ನಂತರ ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡದಿರುವ ಪರಿಣಾಮ ಕಗ್ಗತ್ತಲು ಆವರಿಸುವಂತಾಗಿದೆ. ಪಟ್ಟಣದ ಅಂದ ಹೆಚ್ಚಿಸಲು ಪೂರಕವಾಗಬೇಕಿದ್ದ ಬೆಳಕಿನ ಕಂಬಗಳು ಕತ್ತಲಿನ ಸ್ಮಾರಕಗಳಾಗಿ ಗೋಚರಿಸುತ್ತಿವೆ.

ಪಟ್ಟಣ ವ್ಯಾಪ್ತಿಯ ಯಲ್ಲಾಪುರ, ಬಂಕಾಪುರ, ಬಸ್‌ ನಿಲ್ದಾಣ, ಎಪಿಎಂಸಿ ರಸ್ತೆಗಳ ಎರಡೂ ಬದಿಯಲ್ಲಿ ಒಂದು ವರ್ಷದ ಹಿಂದೆ ಅಲಂಕೃತ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದವರು (ಪ್ರಾಮ್ಸಿ) ಪಟ್ಟಣದಲ್ಲಿ 198ರಷ್ಟು ಅಲಂಕೃತ ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದರು.

ಆರಂಭದಲ್ಲಿ ಯಲ್ಲಾಪುರ-ಬಂಕಾಪುರ ರಸ್ತೆಯ ಎರಡೂ ಬದಿಯಲ್ಲಿ ಮಾತ್ರ ಬೆಳಕು ನೀಡಿದ್ದವು. ಹಲವು ತಿಂಗಳ ನಂತರ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಅಲಂಕೃತ ದೀಪಗಳು ಬೆಳಗಿದ್ದವು. ಆದರೆ, ಬಣ್ಣದ ಬೆಳಕಿನ ಆಕರ್ಷಣೆ ಬಹಳ ದಿನಗಳವರೆಗೆ ಉಳಿಯಲಿಲ್ಲ. ಅಲಂಕೃತಕ್ಕಾಗಿ ಬಾಗಿರುವ ಕಂಬಗಳಲ್ಲಿನ ಬಲ್ಬ್‌ಗಳು ನಿಧಾನವಾಗಿ ಆರುತ್ತಿವೆ. ಹಲವು ದಿನಗಳಿಂದ ಬಹುತೇಕ ದೀಪಗಳು ಉರಿಯದೆ ಕತ್ತಲು ಆವರಿಸಿದೆ.

‘ಕೆಲವೆಡೆ ಅಲಂಕೃತ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಅಂತಹ ಬಲ್ಬ್‌ಗಳನ್ನು ಬದಲಿ ಮಾಡುವುದು, ದುರಸ್ತಿ ಕಾರ್ಯ ಕೈಗೊಳ್ಳುವುರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಕಾಮಗಾರಿ ಮುಗಿದಿದೆಯೋ ಅಥವಾ ಇನ್ನೂ ಬಾಕಿ ಇದೆಯೋ ಗೊತ್ತಿಲ್ಲ. ಅಲ್ಲದೇ, ಕಾಮಗಾರಿಯನ್ನು ಇನ್ನೂ ತನಕ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದವರು ಹಸ್ತಾಂತರಿಸಿಲ್ಲ. ಆದರೆ, ವಿದ್ಯುತ್‌ ಬಿಲ್‌ನ್ನು ಮಾತ್ರ ಪಟ್ಟಣ ಪಂಚಾಯಿತಿ ವತಿಯಿಂದಲೇ ಭರಿಸಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಚಂದ್ರಶೇಖರ ಹೇಳುತ್ತಾರೆ.

‘ಕಾಮಗಾರಿಯು ಪಟ್ಟಣ ಪಂಚಾಯಿತಿಯ ಹೆಸರಿನಲ್ಲಿಯೇ ಒಪ್ಪಂದವಾಗಿ ಆರಂಭಿಸಲಾಗಿದೆ. ಲೋಕೋಪಯೋಗಿ ಇಲಾಖೆಯಡಿ ಬರುವ ‘ಪ್ರಾಮ್ಸಿʼ ವಿಭಾಗದವರು ಕಾಮಗಾರಿ ಮಾಡಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಪ್ಪ ಹ್ಯಾಟಿ ಹೇಳಿದರು.

‘ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬಲ್ಬ್‌ಗಳು ಹಾಳಾಗಿವೆ. ಪಟ್ಟಣದ ಕೆಲವೆಡೆ ಕತ್ತಲು ಆವರಿಸುತ್ತಿದ್ದು, ಸಂಬಂಧಿಸಿದ ಇಲಾಖೆಯವರು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಕಾಮಗಾರಿ ಮುಗಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರೇ, ನಿರ್ವಹಣೆ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಕಾಮಗಾರಿ ಮಾಡಿದವರನ್ನು ಎಲ್ಲಿ ಸಂಪರ್ಕಿಸಬೇಕು ಎಂಬುದು ತಿಳಿಯದಾಗಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಜಾಖಾನ ಪಠಾಣ ಹೇಳಿದರು.‌

ಹಲವೆಡೆ ಕೆಲಸ ಬಾಕಿ

‘ಪಟ್ಟಣದ ಹುಬ್ಬಳ್ಳಿ ರಸ್ತೆಯ ಎಪಿಎಂಸಿ ಹಾಗೂ ಶಿರಸಿ ರಸ್ತೆಯ ಅರಣ್ಯ ಇಲಾಖೆಯಿಂದ ಮಹಾಲೆ ಮಿಲ್‌ವರೆಗೆ ಅಲಂಕೃತ ವಿದ್ಯುತ್‌ ಕಂಬಗಳನ್ನು ಅಳವಡಿಸುವ ಕೆಲಸ ಇನ್ನೂ ಬಾಕಿಯಿದೆ. ಹಲವೆಡೆ ಸಿಮೆಂಟ್‌ ಕಟ್ಟೆಗಳನ್ನು ಕಟ್ಟಿದ್ದಾರೆ. ಆದರೆ ಅದರ ಮೇಲೆ ಕಂಬಗಳನ್ನು ಅಳವಡಿಸಿಲ್ಲ. ಕಳೆದ ವರ್ಷ ವಿಧಾನಸಭಾ ಚುನಾವಣೆ ಕೆಲವು ತಿಂಗಳು ಇರುವಾಗ ಕಾಮಗಾರಿ ಆರಂಭಗೊಂಡಿತ್ತು. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭಗೊಳ್ಳುವ ಹಂತದಲ್ಲಿದ್ದರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮುಕ್ತಾಯಗೊಂಡಿಲ್ಲ. ಹೊಸ ಕಂಬಗಳನ್ನು ಅಳವಡಿಸಿದ್ದರಿಂದ ಹಳೆಯ ಕಂಬಗಳಲ್ಲಿದ್ದ ಬಲ್ಬ್‌ಗಳನ್ನು ತೆಗೆದಿದ್ದಾರೆ. ಈಗ ಎರಡೂ ಕಂಬಗಳಲ್ಲಿ ಬಲ್ಬ್‌ಗಳು ಉರಿಯುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರಮೋದ ರಾವ್‌ ಆರೋಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT