ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ತೊಂದರೆ ನೀಡಿದರೆ ಶಿಸ್ತುಕ್ರಮ

ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರಿಗೆ ಎಚ್ಚರಿಕೆ
Last Updated 7 ಸೆಪ್ಟೆಂಬರ್ 2019, 12:48 IST
ಅಕ್ಷರ ಗಾತ್ರ

ಶಿರಸಿ: ಪಾಸ್ ಹೊಂದಿರುವ ವಿದ್ಯಾರ್ಥಿಗಳ ಜೊತೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರು ವಿನಯದಿಂದ ವರ್ತಿಸಬೇಕು. ಅಸಭ್ಯವಾಗಿ ವರ್ತಿಸುವ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆಗ್ರಹಿಸಿದರು.

ಶನಿವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ವಿಷಯ ಪ್ರಸ್ತಾಪಿಸಿ, ಮಕ್ಕಳಿಗೆ ಅನುಕೂಲವಾಗುವಂತೆ ಬಸ್‌ ವೇಳೆ ನಿಗದಿಪಡಿಸಬೇಕು ಎಂದರು. ‘ಪಾಸ್ ಹೊಂದಿರುವ ಮಕ್ಕಳಿಗೆ ತೊಂದರೆ ನೀಡಿದರೆ, ಅಂತಹ ನಿರ್ವಾಹಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಹೇಳಿದರು.

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್‌ಐಡಿಎಲ್) ತಾಲ್ಲೂಕಿನ ವಿವಿಧೆಡೆಗಳಲ್ಲಿ ನಡೆಸುತ್ತಿರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಶಿರಸಿಯ ದೇವಿಕೆರೆ ಪಿಚ್ಚಿಂಗ್ ಎರಡು ಬಾರಿ ಕುಸಿದಿದೆ. ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಆರೋಪಿಸಿದರು.

‘ಕೆಆರ್‌ಐಡಿಎಲ್ ಮಾಡಿರುವ ಕಾಮಗಾರಿಗಳು ಬೇಗ ಹಾಳಾಗುತ್ತವೆ. ಹೀಗಾಗಿ ಜನತೆಗೆ ಈ ಸಂಸ್ಥೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ. ಈ ಸಂಸ್ಥೆಯ ಕಳಪೆ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಸದಸ್ಯ ನರಸಿಂಹ ಹೆಗಡೆ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಮಾಹಿತಿ ನೀಡಿ, ‘ಪ್ರಸಕ್ತ ವರ್ಷ ಶೇ 362ರಷ್ಟು ಹೆಚ್ಚು ಮಳೆ ಹೆಚ್ಚಾಗಿದೆ. 568 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸಿಬ್ಬಂದಿ ಕೊರತೆಯಿಂದ ಕಾರ್ಯ ವಿಳಂಬವಾಗುತ್ತಿದೆ. ಇನ್ನು 63 ಪ್ಲಾಟ್‌ಗಳಲ್ಲಿ ಸಮೀಕ್ಷೆ ನಡೆಸಬೇಕಾಗಿದೆ’ ಎಂದರು. ಸಮೀಕ್ಷೆ ಕಾರ್ಯ ಸರಿಯಾಗಿ ನಡೆಯಬೇಕು. ರೈತರಿಗೆ ಅನ್ಯಾಯವಾಗಬಾರದು ಎಂದು ಶ್ರೀಲತಾ ಕಾಳೇರಮನೆ ಸೂಚಿಸಿದರು.

‘ತಾಲ್ಲೂಕಿನಲ್ಲಿ 154 ಹೆಕ್ಟೇರ್‌ನಲ್ಲಿ ಅಡಿಕೆ, ಬಾಳೆ, ಶುಂಠಿ, ಅನಾನಸ್ ಬೆಳೆ ನಾಶವಾಗಿದೆ. 6600 ಹೆಕ್ಟೇರ್‌ನಲ್ಲಿ ಶೇ 33ಕ್ಕಿಂತ ಹೆಚ್ಚು ಅಡಿಕೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ ಹೆಗಡೆ ತಿಳಿಸಿದರು.

ಅಡಿಕೆ ಕೊಳೆರೋಗಕ್ಕೆ ವಿಶೇಷ ಪರಿಹಾರ ನೀಡಬೇಕು. ಗ್ರಾಮೀಣ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಇವೆರಡಕ್ಕೂ ಪ್ರತ್ಯೇಕ ಪ್ಯಾಕೇಜ್ ನೀಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಒತ್ತಾಯಿಸಿದರು.

ರೈತರ ಸಾಲಮನ್ನಾಕ್ಕೆ ಸಂಬಂಧಿಸಿ ₹ 106 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ₹ 66 ಕೋಟಿ ಬಿಡುಗಡೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧಿಕಾರಿ ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಅವರು ‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ಕ್ರಮವಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT