ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಸ್ತುವಾರಿ ಸಮಿತಿಯೂ ಪಕ್ಷಗಾರ: ನ್ಯಾಯಾಲಯದ ತೀರ್ಪು

ಗೋಕರ್ಣ ದೇವಸ್ಥಾನದ ಪೂಜಾ ವಿವಾದ
Published : 5 ಏಪ್ರಿಲ್ 2022, 15:27 IST
ಫಾಲೋ ಮಾಡಿ
Comments

ಗೋಕರ್ಣ: ಇಲ್ಲಿಯ ಮಹಾಬಲೇಶ್ವರ ದೇವಸ್ಥಾನದ ಪೂಜಾ ವಿವಾದಕ್ಕೆ ಸಂಬಂಧಿಸಿ ಅನುವಂಶೀಯ ಉಪಾಧಿವಂತರ ಹಕ್ಕು ಬಾಧ್ಯತೆಗೆ ನ್ಯಾಯಾಲಯದಲ್ಲಿ, ದೇವಸ್ಥಾನದ ಮೇಲುಸ್ತುವಾರಿ ಸಮಿತಿಯೂ ಪಕ್ಷಗಾರ ಎಂದು ಕುಮಟಾದ ಹಿರಿಯ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶ ವಿ.ಪ್ರಕಾಶ ನಾಯಕ ಮಾರ್ಚ್ 28ರಂದು ಈ ತೀರ್ಪು ನೀಡಿದ್ದಾರೆ. ಇದರ ವಿರುದ್ಧ ಉಪಾಧಿವಂತ ಮಂಡಳ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ಪುನಃ ಇದೇ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

ದೇವಸ್ಥಾನದಲ್ಲಿ ಪೂಜಾ ವಿಷಯಕ್ಕೆ ಸಂಬಂಧಿಸಿದ ಅನುವಂಶೀಯ ಉಪಾಧಿವಂತರಾದ ಚಿಂತಾಮಣಿ ಉಪಾಧ್ಯ ಮತ್ತು ಇತರ 32 ಜನರ ಅರ್ಜಿಯನ್ನು 2018ರಲ್ಲಿ ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿತ್ತು. ಅದರ ವಿರುದ್ಧ ಆಗಿನ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅಲ್ಲಿಯೂ ಅನುವಂಶೀಯ ಉಪಾಧಿವಂತರ ಪರವಾಗಿಯೇ ತೀರ್ಪು ಬಂದಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು.

ನಂತರ ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸುವಂತೆ ಚಿಂತಾಮಣಿ ಉಪಾಧ್ಯ ಮತ್ತು ಇತರರು, ಕುಮಟಾ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಸ್ವಲ್ಪ ದಿನದಲ್ಲಿಯೇ ದೇವಾಲಯದ ಆಡಳಿತ ಬದಲಾಗಿತ್ತು.

ದೇವಸ್ಥಾನದ ಆಡಳಿತ ನಡೆಸುತ್ತಿರುವ, ಸುಪ್ರೀಂಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿಯು ಹೈಕೋರ್ಟ್ ಆದೇಶವು ತನಗೆ ಸಂಬಂಧ ಪಡುವುದಿಲ್ಲ. ಅದು ಹಿಂದಿನ ಆಡಳಿತಕ್ಕೆ ಸಂಬಂಧಪಟ್ಟಿದ್ದಾಗಿದೆ. ಸಮಿತಿಯು ಸುಪ್ರೀಂಕೋರ್ಟ್‌ ಆದೇಶಕ್ಕೆ ಮಾತ್ರ ಭಾದ್ಯಸ್ಥ ಎಂದು ಉತ್ತರಿಸಿದ್ದರು.

ಇದರ ಬಗ್ಗೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು ಮಾರ್ಚ್ 28ರಂದು ಕುಮಟಾ ಹಿರಿಯ ಸಿವಿಲ್ ನ್ಯಾಯಾಧೀಶರು, ಮೇಲುಸ್ತುವಾರಿ ಸಮಿತಿಯೂ ಉಪಾಧಿವಂತರ ಹಕ್ಕು ಬಾಧ್ಯತೆಗೆ ಸಂಬಂಧಿಸಿದೆ ಎಂದು ತೀರ್ಪು ನೀಡಿದ್ದಾರೆ.

ಮಾರ್ಚ್ 28 ಕುಮಟಾ ನ್ಯಾಯಾಲಯದ ತೀರ್ಪಿಗೆ ಹಿಂದಿನ ಆಡಳಿತದ ಪರವಾಗಿರುವ ಉಪಾಧಿವಂತ ಮಂಡಳ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು, ಇದು ಆಡಳಿತಕ್ಕೆ ಸಂಬಂಧ ಪಟ್ಟಿದ್ದು. ಇದರಲ್ಲಿ ಉಪಾಧಿವಂತ ಮಂಡಲದ ಯಾವುದೇ ಪಾತ್ರವಿಲ್ಲ. ಆದ್ದರಿಂದ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅನುವಂಶೀಯ ಉಪಾಧಿವಂತರ ಪರವಾಗಿ ಶಿರಸಿಯ ಹಿರಿಯ ವಕೀಲ ಅರುಣಾಚಲ ಹೆಗಡೆ ಮತ್ತು ಹೊನ್ನಾವರದ ಸುರೇಶ ವಿ. ಅಡಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT