ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕೊರೊನಾ ಬಗ್ಗೆ ಸಾರ್ವಜನಿಕರ ಗೊಂದಲ ಪರಿಹರಿಸಿ-

ಕಾರವಾರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಧಿಕಾರಿಗಳಿಗೆ ಒತ್ತಾಯ
Last Updated 17 ಆಗಸ್ಟ್ 2020, 17:21 IST
ಅಕ್ಷರ ಗಾತ್ರ

ಕಾರವಾರ: ‘ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಜನರಲ್ಲಿ ಗೊಂದಲವಿದೆ. ಆರೋಗ್ಯ ಇಲಾಖೆಯಿಂದ ಸರಿಯಾದ ಮಾಹಿತಿಯು ಸಾರ್ವಜನಿಕರಿಗೆ ತಲುಪುತ್ತಿಲ್ಲ. ಇದಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಠರಾವು ಸ್ವೀಕರಿಸಲಾಯಿತು.

ಅಧ್ಯಕ್ಷೆ ಪ್ರಮೀಳಾ ನಾಯ್ಕ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ‘ಕೊರೊನಾ ಸಾಮಾನ್ಯ ಕಾಯಿಲೆ. ಅದರ ಬಗ್ಗೆ ಆತಂಕ ಬೇಡ ಎಂದು ಹಲವು ತಜ್ಞರು, ವೈದ್ಯರು ಹೇಳುತ್ತಿದ್ದಾರೆ. ಆದರೆ, ಆರೋಗ್ಯ ಇಲಾಖೆಯು ಇದು ಗಂಭೀರ ಆರೋಗ್ಯ ಸಮಸ್ಯೆ ಎಂದು ಹೇಳುತ್ತಿದೆ. ಇದರಿಂದ ಜನರಿಗೆ ಗೊಂದಲವಾಗಿದೆ. ಜನರಿಗೆ ಸರಿಯಾದ ಮಾಹಿತಿ ಸಿಗಬೇಕು’ ಎಂದು ಹೇಳಿದರು.

ಈ ಬಗ್ಗೆ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ ಅಧಿಕಾರಿ, ‘ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯವಾಗಬಹುದು. ಇವತ್ತು ಗಂಟಲುದ್ರವ ಪರೀಕ್ಷೆ ಮಾಡಿಸಿ ಕೋವಿಡ್ ನೆಗೆಟಿವ್ ಬಂದವರಿಗೆ ಎರಡು ದಿನಗಳ ಬಳಿಕ ಪಾಸಿಟಿವ್ ಬರಲಾರದು ಎಂದೇನಿಲ್ಲ. ಈ ಅವಧಿಯಲ್ಲಿ ಅವರು ಮುಟ್ಟಿದ ವಸ್ತುಗಳು, ಸಿಕ್ಕಿದ ಜನರಿಂದ ಹರಡುವ ಸಾಧ್ಯತೆಯಿದೆ. ಆದ್ದರಿಂದ ಜಾಗ್ರತೆಯಿಂದ ಇರಬೇಕು’ ಎಂದರು.

‘ಅಂಗನವಾಡಿಗಳಿಗೆ ಪೂರೈಕೆ ಮಾಡುವ ತೊಗರಿ ಬೇಳೆ ಗುಣಮಟ್ಟವಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದ ಶಿಶು ಯೋಜನಾಧಿಕಾರಿ ಸೋನಲ್ ಐಗಳ, ‘ಬೈತಖೋಲ್‌ನಲ್ಲಿ ತೊಗರಿಬೇಳೆ ಹಾಳಾಗಿದೆ. ಅದನ್ನು ಯಾರಿಗೂ ಹಂಚಿಲ್ಲ. ಉಳಿದೆಡೆಗೆ ನೀಡಿರುವ ಅಕ್ಕಿ ಹಾಗೂ ಬೇಳೆ ಉತ್ತಮ ಗುಣಮಟ್ಟದಿಂದ ಕೂಡಿದೆ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 15 ಮಕ್ಕಳಿದ್ದು, ಸತ್ಯಸಾಯಿ ಸಂಸ್ಥೆ ಪೂರೈಕೆ ಮಾಡಿರುವ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ’ ಎಂದರು.

ಅರಣ್ಯ ಇಲಾಖೆಯು ಶಿರವಾಡ ಸುತ್ತಮುತ್ತ ಅಕೇಶಿಯಾ ಸಸಿಗಳನ್ನು ಅನಗತ್ಯವಾಗಿ ನಾಟಿ ಮಾಡಿದೆ. ಇದರಿಂದ ಅಂತರ್ಜಲಕ್ಕೆ ಸಮಸ್ಯೆಯಗುತ್ತಿದೆ ಎಂದು ಸದಸ್ಯ ಮಾರುತಿ ನಾಯ್ಕ ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ.ನಾಯ್ಕ, ‘ಇಲಾಖೆಯಿಂದ 500 ಹೆಕ್ಟೇರ್‌ಗಳಷ್ಟು ಗುರಿ ನೀಡಿದ್ದರೂ 10 ಹೆಕ್ಟೇರ್ ಮಾತ್ರ ಅಕೇಶಿಯಾ ನಾಟಿ ಮಾಡಲಾಗಿದೆ. ಮುಂದಿನ ಉರುವಲು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನೆಡಲಾಗಿದೆ. ಪರಿಸರದ ಮೇಲೆ ಸಮಸ್ಯೆಯಾಗಂತೆ ಮಿಶ್ರ ತಳಿಯ ಸಸ್ಯಗಳನ್ನೂ ನೆಡಲಾಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದಕುಮಾರ ಬಾಲಪ್ಪನವರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT