ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಸೌಲಭ್ಯ ವಂಚಿತ ರುದ್ರಭೂಮಿ

Published 8 ಜನವರಿ 2024, 5:58 IST
Last Updated 8 ಜನವರಿ 2024, 5:58 IST
ಅಕ್ಷರ ಗಾತ್ರ

ಕಾರವಾರ: ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಸಬೇಕೆಂದರೆ ಜಿಲ್ಲೆಯಲ್ಲಿ ಸ್ಮಶಾನ ಜಾಗಕ್ಕೆ ಹತ್ತಾರು ವಿಘ್ನಗಳು ಎದುರಾಗುತ್ತಿವೆ. ಒಂದೆಡೆ ಜಾಗದ ವಿವಾದ ಇದ್ದರೆ, ಇನ್ನೊಂದೆಡೆ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕೊರಗು ಇನ್ನೂ ಮುಂದುವರೆದಿದೆ.

ಜಿಲ್ಲೆಯಲ್ಲಿ 1,288 ಗ್ರಾಮಗಳ ಪೈಕಿ ಕೇವಲ ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದಿತ್ತು. ಈಚೆಗಷ್ಟೆ ಎಲ್ಲ ಗ್ರಾಮಗಳಿಗೂ ಸರಾಸರಿ 10 ಗುಂಟೆಯಷ್ಟು ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿ ಆದೇಶಿಸಲಾಗಿದೆ. ಇದು ಸದ್ಯ ಆದೇಶಕ್ಕೆ ಸೀಮಿತವಾಗಿ ಉಳಿದಿದೆ. ಜಾಗ ಗುರುತಿಸಿದ್ದರೂ ಗಡಿ ಗುರುತು ಹಾಕಿಲ್ಲ ಎಂಬ ದೂರುಗಳಿವೆ. ರುದ್ರಭೂಮಿಗೆ ಬೇಕಿರುವ ರಸ್ತೆ, ನೀರು ಸೌಲಭ್ಯ ಇನ್ನೂ ಸಿಕ್ಕಿಲ್ಲ. ಶವಸಂಸ್ಕಾರಕ್ಕೆ ಚಾವಣಿ ಸಹಿತ ದಹನ ಕಟ್ಟೆ ನಿರ್ಮಿಸುವ ಕೆಲಸ ಇನ್ನಷ್ಟೆ ಆಗಬೇಕಿದೆ.

ಕಾರವಾರ ತಾಲ್ಲೂಕಿನ ಸಿದ್ಧರದಲ್ಲಿ ಸ್ಮಶಾನ ಭೂಮಿಗೆ ಸಾಗಲು ರಸ್ತೆ ಸಮಸ್ಯೆ ಇದೆ. ಮುಡಗೇರಿಯಲ್ಲಿ ಶೆಡ್ ಹಾಳಾಗಿ ವರ್ಷಗಳೆ ಕಳೆದಿದೆ. ವೈಲವಾಡಾ, ಮಾಜಾಳಿ ಸೇರಿ ಕೆಲವೆಡೆ ಸ್ಮಶಾನಕ್ಕೆ ಮೀಸಲಿಟ್ಟ ಜಾಗ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ.

ಶಿರಸಿ ತಾಲ್ಲೂಕಿನ ಇಟಗುಳಿ, ಹುತ್ಗಾರ, ವಾನಳ್ಳಿ, ಮಂಜುಗುಣಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಸೂಕ್ತ ಸ್ಮಶಾನ ವ್ಯವಸ್ಥೆಯಿಲ್ಲ. ಇದರಿಂದ ಶವ ಸಂಸ್ಕಾರಕ್ಕೆ ಪರದಾಡುವ ಸನ್ನಿವೇಶ ಇದೆ. ಶಿರಸಿಯ ನೆಹರೂ ನಗರದಲ್ಲಿರುವ ಸ್ಮಶಾನ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಸಭೆ ಇದರ ನಿರ್ವಹಣೆಯನ್ನೇ ಮರೆತಿದೆ.

ಪುರಾಣ ಪ್ರಸಿದ್ಧ ಗೋಕರ್ಣ ಧಾರ್ಮಿಕ ಕ್ಷೇತ್ರದಲ್ಲಿ ಶವಸಂಸ್ಕಾರ ಮಾಡುವ ಸ್ಥಳ ಸ್ಮಶಾನಕ್ಕೆ ಪವಿತ್ರವಾದ ಸ್ಥಾನವಿದೆ. ಇಲ್ಲಿಯ ವಿಶೇಷವೆಂದರೆ ಜಾತಿ, ಭೇದವಿಲ್ಲದೇ ಎಲ್ಲರೂ ಈ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಬಹುದಾಗಿದೆ. ಕಡಿಮೆ ಕಟ್ಟಿಗೆಯಲ್ಲಿ ಶವ ಸುಡಬಹುದು ಎಂಬ ಮಾತೂ ಇದೆ. ಪವಿತ್ರ ಸ್ಥಳವಾದ್ದರಿಂದ ನಾಡಿನ ವಿವಿಧ ಸ್ಥಳದಿಂದ ಶವ ಇಲ್ಲಿಗೆ ತಂದು ಸುಡುವುದು ರೂಡಿಯಲ್ಲಿದೆ.

ಆದರೆ, ರುದ್ರಭೂಮಿಯಲ್ಲಿ ಸ್ವಚ್ಛತೆಯೂ ಇಲ್ಲ. ಶವ ಸಂಸ್ಕಾರಕ್ಕೆ ಯಾವುದೇ ಸೌಲಭ್ಯ ಇಲ್ಲ. ಎಲ್ಲದನ್ನೂ ಹೊರಗಿನಿಂದಲೇ ಜನರೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕೆಲವೊಮ್ಮೆ ಕತ್ತಲೆಯಲ್ಲಿಯೇ ಶವಸಂಸ್ಕಾರ ಮಾಡುವ ಪರಿಸ್ಥಿತಿಯೂ ಬರುತ್ತಿದೆ. ಸ್ಮಶಾನ ನಿರ್ವಹಣೆಗೆ ಸಿಬ್ಬಂದಿ ನೇಮಿಸುವ ಕೆಲಸವನ್ನೂ ಗ್ರಾಮ ಪಂಚಾಯ್ತಿ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಮೂಲಸೌಕರ್ಯದ ಕೊರತೆ:

ಭಟ್ಕಳ ತಾಲ್ಲೂಕಿನ ಬಹುತೇಕ ಸಶ್ಮಾನದಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಅಂತ್ಯಕ್ರೀಯೆ ವೇಳೆ ಸುರಿಯುವ ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕನಿಷ್ಠ ಮೇಲ್ಚಾವಣಿ ಕೂಡ ಇಲ್ಲ. ಮಣ್ಕುಳಿ ಸಶ್ಮಾನದಲ್ಲಿ ಗಿಡಗಂಟಿಗಳು ರಾಶಿ ತುಂಬಿಕೊಂಡಿದೆ. ಬಂದರು ರಸ್ತೆಯಲ್ಲಿರುವ ರೂದ್ರಭೂಮಿಯನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸಿದ ಕಾರಣ ಸ್ಥಳೀಯರೆ ಅದನ್ನು ತಮ್ಮ ಸ್ವಂತ ವೆಚ್ಚದಲ್ಲಿ ಅಭಿವೃದ್ದಿಪಡಿಸಿಕೊಂಡಿದ್ದಾರೆ. ಮಾವಳ್ಳಿ, ಯಲ್ವಡಿಕವೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೂದ್ರಭೂಮಿ ಜಾಗವು ತಕರಾರಿನಲ್ಲಿದೆ.

ಯಲ್ಲಾಪುರ ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿ ಕೊರತೆಗಳ ಆಗರವಾಗದೆ. ರುದ್ರಭೂಮಿಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಿಲ್ಲ. ಸೋಲಾರ್ ಬ್ಯಾಟರಿಗಳನ್ನು ಅಳವಡಿಸಲಾಗಿತ್ತಾದರೂ ಅದನ್ನು ಕಳವು ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಭಾಗದಲ್ಲಿ ಸೂಕ್ತ ಸ್ಮಶಾನ ಇಲ್ಲ. ಕೆಲವೆಡೆ ಗ್ರಾಮ ಪಂಚಾಯ್ತಿ ಸ್ಥಳ ಗುರುತಿಸಿದ್ದರೂ ಶೆಡ್ ಇಲ್ಲ. ಹಾಗಾಗಿ ಜನರು ಅಕ್ಕಪಕ್ಕದ ಅರಣ್ಯದಲ್ಲಿಯೇ ಶವಗಳನ್ನು ಸುಡುವುದು ಸಾಮಾನ್ಯವಾಗಿದೆ.

‘ಆನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ನಿರ್ದಿಷ್ಟ ಸ್ಥಳ ಗುರುತಿಸದ ಕಾರಣ ಜನ ಅರಣ್ಯದಲ್ಲಿ ಬೇಕಾಬಿಟ್ಟಿ ಸ್ಮಶಾನ ಮಾಡಿಕೊಂಡಿದ್ದಾರೆ’ ಎಂದು ಆನಗೋಡದ ರಮೇಶ ಹೆಗಡೆ ದೂರುತ್ತಾರೆ.

ಮುಂಡಗೋಡ ತಾಲ್ಲೂಕಿನ ಸ್ಮಶಾನಗಳಿಗೆ ಮೀಸಲಿಟ್ಟ ಜಾಗದಲ್ಲಿ ಕೆಲವು ಅರಣ್ಯ ಪ್ರದೇಶಗಳಲ್ಲಿ ಇದ್ದರೇ, ಇನ್ನೂ ಕೆಲವು ಗ್ರಾಮಠಾಣಾ ಜಾಗಗಳಾಗಿವೆ. ಪಟ್ಟಣ ವ್ಯಾಪ್ತಿಯ ಬಂಕಾಪುರ ರಸ್ತೆಯ ಲ್ಲಿರುವ ಸ್ಮಶಾನದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಜಾಗ ಅತಿಕ್ರಮಣ: 

‘ಬಾಚಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿದ ಜಾಗ ಅತಿಕ್ರಮಣ ಆಗಿದೆ. ಅರಣ್ಯ ಪ್ರದೇಶದಲ್ಲಿಯೇ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿಯಿದೆ. ಕೆಲವೊಮ್ಮೆ ಅರಣ್ಯ ಇಲಾಖೆಯವರು ತಕರಾರು ತೆಗೆಯುತ್ತಾರೆ. ಸ್ಮಶಾನ ಅಭಿವೃದ್ಧಿಯು ದೂರದ ಮಾತಾಗಿದ್ದು, ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಲು ಗ್ರಾಮ ಪಂಚಾಯ್ತಿ ಮುಂದಾಗಬೇಕಿದೆ’ ಎಂದು ಗ್ರಾಮಸ್ಥ ನಿಂಗಪ್ಪ ಕುರುಬರ ಒತ್ತಾಯಿಸಿದರು.

‘ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಜಾಗ ಹಂಚಿಕೆ ಮಾಡಿದ್ದಾರೆ. ಸ್ಮಶಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಿದ್ದು, ಅನುಮೋದನೆಗೆ ಕಳಿಸುವುದು ಬಾಕಿಯಿದೆ’ ಎಂದು ಪಿಡಿಒ ವೆಂಕಪ್ಪ ಲಮಾಣಿ ಹೇಳುತ್ತಾರೆ.

ದಾಂಡೇಲಿ ತಾಲ್ಲೂಕಿನ ಸಕ್ಕಲಗ ಹತ್ತಿರ ಆಲೂರು, ಅಂಬೇವಾಡಿ ಗ್ರಾಮಗಳಿಗೆ ಸಂಬಂಧಿಸಿದಂತೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ‌. ಒಂದೇ ಕಡೆ ಜಾಗ ನೀಡಿರುವ ಕಾರಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರಿಂದ ಸ್ಮಶಾನ ಜಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಮಶಾನಕ್ಕೆ ಗುರುತಿಸಿದ ಜಾಗದ ಸಮೀಪದ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಗ್ರಾಮಸ್ಥರು ಗ್ರಾಮದಲ್ಲಿಯೇ ಜಾಗ ಒದಗಿಸಲು ಪಟ್ಟು ಹಿಡಿದಿದ್ದಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ನಾಯ್ಕ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ.

ಆರಂಭವಾಗದ ಶೆಡ್ ಅಳವಡಿಕೆ ಕೆಲಸ

ಜೊಯಿಡಾದ ಯಾವ ಗ್ರಾಮದಲ್ಲಿಯೂ ಇನ್ನೂ ಪ್ರತ್ಯೇಕ ಸ್ಮಶಾನ ನಿರ್ಮಾಣ ಆಗಿಲ್ಲ. ಜನರು ತಮ್ಮ ಸ್ವಂತ ಜಮೀನು ಅಥವಾ ಕಾಡಿನ ಮಧ್ಯ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ತಾಲ್ಲೂಕು ಕೇಂದ್ರದ ಬಾಮನವಾಡಾ ಹಾಗೂ ಪಟ್ಟಗಾಳಿ ಕ್ರಾಸ್ ಬಳಿ ಸ್ಮಶಾನ  ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು ಸ್ಥಳೀಯರ ವಿರೋಧದಿಂದ ಶೆಡ್ ಅಳವಡಿಸುವ ಕಾರ್ಯ ಪ್ರಾರಂಭವಾಗಿಲ್ಲ.

‘ಜನಸಂಖ್ಯೆ ಹೆಚ್ಚಿರುವ ರಾಮನಗರದಲ್ಲಿ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಮಶಾನ ನಿರ್ಮಾಣ ಆಗಿಲ್ಲ. ತುರ್ತಾಗಿ ಕೆಲವು ಸೌಲಭ್ಯಗಳೊಂದಿಗೆ ಸ್ಮಶಾನ ನಿರ್ಮಾಣ ಆಗಬೇಕು’ ಎನ್ನುತ್ತಾರೆ ಸ್ಥಳೀಯ ರಾಮುನಾಯ್ಕ.

‘ಗ್ರಾಮೀಣ ಭಾಗದಲ್ಲಿ ಸ್ಮಶಾನ ಭೂಮಿಗೆ ನಿರ್ದಿಷ್ಟ ಜಾಗ ಗುರುತಿಸಲಾಗಿದೆ. ಗ್ರಾಮ ಪಂಚಾಯ್ತಿಯ ಮೂಲಕ ಹಂತ ಹಂತವಾಗಿ ಸ್ಮಶಾನಕ್ಕೆ ಶೆಡ್ ನಿರ್ಮಾಣ ಮಾಡಲಾಗುತ್ತದೆ’ ಎಂಬುದು ತಹಶೀಲ್ದಾರ್ ಮಂಜುನಾಥ ಮುನ್ನೋಳಿ ಪ್ರತಿಕ್ರಿಯೆ.

ಸೌಲಭ್ಯ ಒದಗಿಸಲು ಸಿದ್ಧ: ಗಜು

ಕುಮಟಾ ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣದ ಪಕ್ಕದಲ್ಲಿ ಪುರಸಭೆ ಮಾಲೀಕತ್ವದ ಚಿತಾಗಾರ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ.

‘ಹಿಂದೆ ರೋಟರಿ ಸಂಸ್ಥೆ ಈ ಚಿತಾಗಾರದಲ್ಲಿ ದಹನ ಚೌಕಿ, ತೆರೆದ ಬಾವಿ, ವಿಶ್ರಾಂತಿ ಸ್ಥಳ, ಪ್ರವೇಶ ದ್ವಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಲಿಕಾನ್ ಚೇಂಬರ್ ಸೌಲಭ್ಯ ಕಲ್ಪಿಸಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಹಿಂದಿನ ಸೌಲಭ್ಯಗಳೆಲ್ಲ ಹಾಳಾಗಿ ಜನರ ಬಳಕೆಗೆ ಸಿಗದಂತಾಗಿದೆ. ಸಮುದಾಯ ಕೈ ಜೋಡಿಸಿದರೆ ರೋಟರಿ ಸಂಸ್ಥೆ ಮುಂದೆ ನಿಂತು ಸೌಲಭ್ಯ ಒದಗಿಸಲು ಸಿದ್ಧ’ ಎನ್ನುತ್ತಾರೆ ರೋಟರಿ ಕ್ಲಬ್ ಕುಮಟಾ ಘಟಕದ ಅಧ್ಯಕ್ಷ ಎನ್.ಆರ್.ಗಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT