ಶಿರಸಿ: ಅಬ್ಬರದ ಮುಂಗಾರಿನ ನಂತರದ ಬಿಸಿಲು ಮಳೆಯಾಟಕ್ಕೆ ಅಡಿಕೆಗೆ ಕೊಳೆ ರೋಗ ವ್ಯಾಪಕವಾಗುತ್ತಿದೆ. ತೋಟ ಪಟ್ಟಿಗಳಲ್ಲಿ ಮತ್ತೆ ಬೋರ್ಡೊ ದ್ರಾವಣ ಸಿಂಪಡಣೆ ಜೋರಾಗಿದ್ದರೂ ರೋಗ ಹರಡುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಬಿಡುವು ಸಿಕ್ಕಿದೆ. ಆದರೆ ನಿತ್ಯವೂ ಆಗಾಗ ಸುರಿವ ತುಂತುರು ಮಳೆ ನಡುವೆ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಇದರಿಂದ ಅಡಿಕೆಗೆ ಕೊಳೆ ರೋಗ ವ್ಯಾಪಿಸುತ್ತಿದೆ. ಬೇಸಿಗೆಯ ಅತಿ ಉಷ್ಣಾಂಶದಿಂದ ಸಿಂಗಾರ ಒಣಗಿ ಇಳುವರಿ ಕುಂಠಿತದ ಆತಂಕ ಅನುಭವಿಸುತ್ತಿದ್ದ ಅಡಿಕೆ ಬೆಳೆಗಾರರಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 650 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ವಿಸ್ತರಿಸುತ್ತಿರುವ ಕೊಳೆ ರೋಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಬಾರಿ ಮುಂಗಾರು ತಡವಾಗಿ ಬಂದಿದ್ದರೂ ಜುಲೈ ಮೊದಲ ವಾರದಿಂದ ಇದುವರೆಗೂ ಬಿಡದೇ ಮಳೆ ಸುರಿದಿದ್ದರಿಂದ ಕೊಳೆ ರೋಗ ಕಾಣಿಸಿಕೊಂಡಿತ್ತು. ಈಗ ಬಿಸಿಲು ಮಿಶ್ರಿತ ಮಳೆಯಿಂದ ಬಹಳ ಬೇಗ ರೋಗಾಣುಗಳು ಜೀವ ಪಡೆದು ಅಡಿಕೆ ಫಸಲನ್ನು ಆಹುತಿ ಪಡೆಯುತ್ತಿವೆ. ಕಳೆದ ಸಾಲಿನಲ್ಲಿ ಬಾಧಿಸಿದ ವಿಪರೀತ ಕೊಳೆ ರೋಗಕ್ಕೆ ತುತ್ತಾದ ಮರಗಳಲ್ಲಿ ಹಾಗೆಯೇ ಉಳಿದ ಫಂಗಸ್‌ನಿಂದ ಈಗ ರೋಗ ಉಲ್ಬಣಗೊಂಡಿದ್ದು, ಈಗಾಗಲೇ ಎರಡು, ಮೂರು ಬಾರಿ ಬೋರ್ಡೊ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಕೊರಗು ರೈತರದ್ದಾಗಿದೆ.
‘ಸಿದ್ದಾಪುರ ತಾಲ್ಲೂಕಿನ ಹುಕ್ಕಳಿ, ಮುತ್ತಿಗೆ, ಬೇಡ್ಕಣಿ, ಮಗೆಗಾರ, ಕಿಲಾರ, ಕೋಡ್ಕಣಿ ಭಾಗದಲ್ಲಿ ವ್ಯಾಪಕ ಹಾನಿಯಾಗಿದೆ. ಉಳಿದಂತೆ ಶಿರಸಿಯ ಮತ್ತಿಘಟ್ಟ, ನೆಗ್ಗು, ಬಿಸಲಕೊಪ್ಪ, ಅಂಕೋಲಾದ ಹಳವಳ್ಳಿ, ಕನಕನಹಳ್ಳಿ, ಸುಂಕಸಾಳ, ಕುಮಟಾದ ವಾಲಗಳ್ಳಿ, ಅಳಕೋಡ, ಕಡ್ಲೆ, ಬಳಕೂರ, ಭಟ್ಕಳದ ಹಾಡವಳ್ಳಿ, ಕೋಣಾರ, ಕಾಯ್ಕಿಣಿ, ಯಲ್ಗಾಪುರದ ಮಾವಿನಮನೆ, ವಜ್ರಳ್ಳಿ, ದೇಹಳ್ಳಿ, ಚಂದಗುಳಿ, ಮುಂಡಗೋಡದ ಬೆಕ್ಕೋಡ, ಕುರ್ಲಿ ಸೇರಿದಂತೆ ಇತರ ಭಾಗಗಳಲ್ಲಿ ಕೊಳೆ ರೋಗ ಹೆಚ್ಚಾಗುತ್ತಿದೆ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
‘ಕಳೆದ ಬಾರಿ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಅಡಿಕೆ ಬೆಳೆಗಾರರು ಶೇ 60ಕ್ಕಿಂತ ಹೆಚ್ಚಿನ ಬೆಳೆಯನ್ನು ಕಳೆದುಕೊಂಡಿದ್ದರು. ಇದರಿಂದ ಕಂಗೆಟ್ಟ ಬೆಳೆಗಾರ ಈ ಬಾರಿ ಪ್ರತಿ ತಿಂಗಳು ತಪ್ಪದೇ ಔಷಧ ಸಿಂಪಡಿಸುವ ಮೂಲಕ ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ’ ಎನ್ನುತ್ತಾರೆ ಕೃಷಿಕ ರಾಮಕೃಷ್ಣ ಭಟ್ ಶಿರಸಿ.
‘ನಾಡಿಗೆ ಮಳೆ ವರದಾನವಾದರೂ ನಮಗೆ ಶಾಪವಾಗಿದೆ. ಮಳೆ ಕಡಿಮೆ ಎಂಬ ಸುದ್ದಿ ಈ ಭಾಗದ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿತ್ತು. ಕಳೆದ ಸಾಲಿನಲ್ಲಿ ಕಳೆದುಕೊಂಡಿದ್ದ ಬೆಳೆಯನ್ನು ಈ ಬಾರಿ ಉಳಿಸಿಕೊಳ್ಳಲೇ ಬೇಕು ಎಂಬ ನಮ್ಮ ಪ್ರಯತ್ನಕ್ಕೆ ಕೊಳೆ ರೋಗ ಶಾಪವಾಗಿದೆ’ ಎನ್ನುತ್ತಾರೆ ಅವರು.
650 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಕೊಳೆ ರೋಗ 5 ಹೆಕ್ಟೇರ್ ಪ್ರದೇಶದಲ್ಲಿ ಶೇ 33ಕ್ಕೂ ಹೆಚ್ಚು ಹಾನಿ 3ಕ್ಕಿಂತ ಹೆಚ್ಚು ಬಾರಿ ಔಷಧ ಸಿಂಪಡಣೆ
ಜಿಲ್ಲೆಯಲ್ಲಿ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊಳೆ ರೋಗ ಬಾಧಿಸುತ್ತಿರುವ ಪ್ರದೇಶ ಹೆಚ್ಚಿದೆ. ಇದೇ ರೀತಿ ಬಿಸಿಲು ಮಳೆಯಾಗುತ್ತಿದ್ದರೆ ರೈತರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆಸತೀಶ ಬಿ.ಪಿ. ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಕೊಳೆರೋಗ ಆರಂಭಕ್ಕೂ ಮುನ್ನ ಬೋರ್ಡೊ ಸಿಂಪಡಣೆ ಮಾಡಿದರೆ ಪ್ರಯೋಜನ ಸಿಗುತ್ತದೆ. ಆದರೆ ಈಗ ತೋಟದಲ್ಲಿ ಕೊಳೆ ವ್ಯಾಪಿಸಿದ್ದು ಯಾವ ಔಷಧ ಸಿಂಪಡಿಸಬೇಕು ಎಂಬುದೇ ತಿಳಿಯದಾಗಿದೆರಾಜಶೇಖರ ಗೌಡ ಬನವಾಸಿ ಅಡಿಕೆ ಬೆಳೆಗಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.