ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಪ್ರಾಣಿ ಪಕ್ಷಿಗಳಿಗೆ ಟ್ಯಾಂಕರ್‌ ನೀರು

ಸಿಮೆಂಟ್‌ ತೊಟ್ಟಿ ತುಂಬಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಶಾಂತೇಶ ಬೆನಕನಕೊಪ್ಪ
Published 10 ಮಾರ್ಚ್ 2024, 5:13 IST
Last Updated 10 ಮಾರ್ಚ್ 2024, 5:13 IST
ಅಕ್ಷರ ಗಾತ್ರ

ಮುಂಡಗೋಡ: ಬಿಸಿಲ ಬೇಗೆಗೆ ಪರಿತಪಿಸುತ್ತಿರುವ ವನ್ಯಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲ್ಲಿನ ಅರಣ್ಯ ಅಧಿಕಾರಿ, ಸಿಬ್ಬಂದಿ ಮಾಡುತ್ತಿದ್ದಾರೆ.

ಅರಣ್ಯ ಪ್ರದೇಶದಲ್ಲಿರುವ ಕೆರೆಕಟ್ಟೆಗಳು ಬಹುತೇಕ ಖಾಲಿಯಾಗಿದ್ದು, ಕುಡಿಯುವ ನೀರಿಗೆ ಪ್ರಾಣಿ, ಪಕ್ಷಿಗಳು ಪರದಾಡುವುದನ್ನು ಕಂಡು, ಟ್ಯಾಂಕರ್‌ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನ ಸನವಳ್ಳಿ, ಅತ್ತಿವೇರಿ, ಅಜ್ಜಳ್ಳಿ, ಕಾಳಗನಕೊಪ್ಪ ಸೇರಿದಂತೆ ಹಲವೆಡೆ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದು, ಅವುಗಳಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿದ್ದಾರೆ. ಒಣಗಿದ ಗಿಡಮರಗಳಿಂದ ಆಹಾರವೂ ಸಿಗದೇ, ವನ್ಯಪ್ರಾಣಿಗಳು ಪರದಾಡುತ್ತಿವೆ. ಜಲಮೂಲಗಳನ್ನು ಅರಸಿ ನಾಡಿನ ಕಡೆ ಬರುತ್ತಿವೆ. ಅದರಲ್ಲಿಯೂ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಡಿನತ್ತ ಬರುತ್ತಿದ್ದು, ನಾಯಿ ದಾಳಿಗೆ ಒಳಗಾಗುತ್ತಿವೆ.

ನಾಯಿ ದಾಳಿಯಿಂದ ಪ್ರಾಣ ಉಳಿಸಿಕೊಳ್ಳುವ ಭರದಲ್ಲಿ ಪಾಳು ಬಿದ್ದ ಬಾವಿ, ಕಾಲುವೆಗಳಲ್ಲಿ ಬಿದ್ದು ಗಾಯಗೊಳ್ಳುತ್ತಿವೆ. ಮಂಗಗಳೂ ಹೆಚ್ಚಿನ ಸಂಖ್ಯೆಯಲ್ಲಿ ಜನವಸತಿ ಪ್ರದೇಶಗಳಲ್ಲಿ ಬಿಡಾರ ಹೂಡುತ್ತಿವೆ. ಆಹಾರ, ನೀರಿನ ಸಮಸ್ಯೆಯಿಂದ ವನ್ಯಪ್ರಾಣಿಗಳು ಪರಿತಪಿಸುತ್ತಿವೆ.

ಕಳೆದ ಐದಾರು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಇಂತದೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಅರಣ್ಯ ಪ್ರದೇಶದ ಕೆರೆಕಟ್ಟೆಗಳು ಸಹಿತ ನಾಡಿನಂಚಿನ ಕೆರೆಗಳೂ ನೀರಿಲ್ಲದೇ ಬರಿದಾಗಿದ್ದವು. ಆಗಲೂ ಪ್ರಾಣಿ. ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲಾಖೆಯವರು ಹಾಗೂ ಸಾರ್ವಜನಿಕರು ಮಾಡಿದ್ದರು. ಮಾರ್ಚ್‌ ಆರಂಭದಲ್ಲಿಯೇ ನೀರಿನ ಅಭಾವ ತೀವ್ರವಾಗಿ ಕಾಡುತ್ತಿದೆ.

ಮಳೆಗಾಲ ಆರಂಭವಾಗುವರೆಗೂ ಜನಜಾನುವಾರು ಸಹಿತ ವನ್ಯಪ್ರಾಣಿಗಳಿಗೂ ನೀರಿನ ತೊಂದರೆ ಆಗಲಿದೆ. ಅರಣ್ಯ ಇಲಾಖೆಯವರು ಈಗಾಗಲೇ ತೊಟ್ಟಿಗಳಲ್ಲಿ ನೀರು ತುಂಬಿಸುವುದಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯ. ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿಯೂ ತೊಟ್ಟಿಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸನವಳ್ಳಿ ಗ್ರಾಮಸ್ಥ ರಾಜು ಗುಬ್ಬಕ್ಕನವರ್‌ ಆಗ್ರಹಿಸಿದರು.

ʼಅರಣ್ಯ ಪ್ರದೇಶದ ಒಳಭಾಗದಲ್ಲಿ ಜಲಮೂಲಗಳು ಖಾಲಿ ಆಗಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಂದರೆ ಆಗದಿರಲಿ ಎಂದು ಈಗಾಗಲೇ ನಿರ್ಮಿಸಿದ್ದ ಸಿಮೆಂಟ್‌ ತೊಟ್ಟಿಗಳಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತಿದೆ. ಆರಂಭದಲ್ಲಿ ನೀರು ಎಷ್ಟು ದಿನಕ್ಕೆ ಖಾಲಿ ಆಗುತ್ತದೆ ಎಂಬುದನ್ನು ನಿಗಾವಹಿಸಿ, ನಂತರದ ದಿನಗಳಲ್ಲಿ ಇಂತಿಷ್ಟು ದಿನಗಳಿಗೆ ಒಮ್ಮೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುವುದು. ದೊಡ್ಡ ಕೆರೆ, ಜಲಾಶಯಗಳಲ್ಲಿ ತಕ್ಕ ಮಟ್ಟಿಗೆ ನೀರು ಇದ್ದು, ಸಣ್ಣ ಕೆರೆಕಟ್ಟೆಗಳು ಖಾಲಿ ಆಗಿವೆ. ಮಳೆ ಆಗುವರೆಗೂ ನೀರುಣಿಸುವ ಕೆಲಸವನ್ನು ಮುಂದುವರೆಸಲಾಗುವುದುʼ ಎಂದು ವಲಯ ಅರಣ್ಯಾಧಿಕಾರಿ ವಾಗೀಶ ಬಿ.ಜೆ ಹೇಳಿದರು.

‘ಅಲ್ಲದೇ, ಪ್ರಾಣಿ, ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಲ್ಲಿ ಮತ್ತಷ್ಟು ಸಿಮೆಂಟ್‌ ತೊಟ್ಟಿಗಳ ನಿರ್ಮಾಣ ಕಾರ್ಯ ನಡೆಸಲಾಗುವುದು. ಪ್ರಾಣಿಗಳಿಗೆ ನೀರಿನ ಕೊರತೆ ಆಗದಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದುʼ ಎಂದು ಅವರು ಹೇಳಿದರು.

ಹುನಗುಂದ ಭಾಗದಲ್ಲಿ ಹೊಸದಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗೆ ಕಳಿಸಲಾಗಿದೆ - ವಾಗೀಶಬಿ.ಜ ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT