ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ತ್ಯಾಜ್ಯ ನೀರಿಗೆ ಕೂಡಿ ಬರದ ಸಂಸ್ಕರಣೆ ಭಾಗ್ಯ

Published 9 ಜೂನ್ 2024, 5:38 IST
Last Updated 9 ಜೂನ್ 2024, 5:38 IST
ಅಕ್ಷರ ಗಾತ್ರ

ಶಿರಸಿ: ನಗರ ತ್ಯಾಜ್ಯ ನೀರು ಮರುಬಳಕೆ ಹಾಗೂ ಸುರಕ್ಷಿತ ವಿಲೇವಾರಿಗಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅಳವಡಿಸಬೇಕಿದ್ದ ಕೊಳಚೆ ನೀರು ಸಂಸ್ಕರಣಾ ಘಟಕ ವ್ಯವಸ್ಥೆ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಅನುಷ್ಠಾನ ಮಾಡದ ಕಾರಣ ನಗರ ತ್ಯಾಜ್ಯ ಸೇರುವ ಗ್ರಾಮೀಣ ಭಾಗದ ಹಳ್ಳ, ತೊರೆಗಳು ರೋಗ ಹರಡುವ ಮೂಲವಾಗಿ ಮಾರ್ಪಡುತ್ತಿವೆ.

ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 80 ಸಾವಿರ ಜನಸಂಖ್ಯೆ ಇದೆ. ನಿತ್ಯ 20–25 ಲಕ್ಷ ಲೀಟರ್ ನೀರು ತ್ಯಾಜ್ಯ ನೀರಾಗಿ ತೆರೆದ ಚರಂಡಿಗೆ ಸೇರುತ್ತದೆ. ಇದರಲ್ಲಿ ಮನೆ ಬಳಕೆ, ಶೌಚಾಲಯ, ಮೂತ್ರಾಯಲ ಬಳಕೆ, ಆಸ್ಪತ್ರೆ, ಚಿಕ್ಕ ಕೈಗಾರಿಕೆಗಳ ತ್ಯಾಜ್ಯವೂ ಸೇರುತ್ತದೆ.

ರಸ್ತೆಯಂಚಿನಲ್ಲಿ ಬೀಸಾಡಿದ ಪ್ಲಾಸ್ಟಿಕ್ ವಸ್ತುಗಳು, ರಾಸಾಯನಿಕಗಳು ವ್ಯಾಪಕವಾಗಿ ಚರಂಡಿ ಪಾಲಾಗುತ್ತವೆ. ಇವುಗಳೆಲ್ಲ ಸೇರಿ ಅಂತಿಮವಾಗಿ ಗ್ರಾಮೀಣ ಭಾಗದಲ್ಲಿ ಹರಿಯುವ ಜಲಮೂಲಕ್ಕೆ ಹೋಗಿ ಸೇರುತ್ತಿದೆ. ದುರಂತದ ಸಂಗತಿ ಏನೆಂದರೆ ತ್ಯಾಜ್ಯ ನೀರು ಶುದ್ಧೀಕರಿಸದೆ ನೇರವಾಗಿ ಈ ಶುದ್ಧ ನೀರಿನ ಮೂಲಕ್ಕೆ ಸೇರುತ್ತಿದೆ. ಇದರಿಂದ ಆಯಾ ಭಾಗದ ಜಲಮೂಲಗಳು ಸಾಂಕ್ರಾಮಿಕ ರೋಗ ಉತ್ಪತ್ತಿಯ ತಾಣಗಳಾಗಿ ಮಾರ್ಪಡುತ್ತಿದ್ದು, ಅದೇ ಜಲಮೂಲ ಅವಲಂಬಿಸಿರುವ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. 

‘ನಗರ ಪ್ರದೇಶದಿಂದ ಪುಟ್ಟನಮನೆ, ಸಹ್ಯಾದ್ರಿ ತಗ್ಗು, ಆನೆಹೊಂಡ, ಕೋಟೆಕೆರೆ ಕೆಳಭಾಗವಾದ ಕೆರೆಗುಂಡಿ ಸೇರಿದಂತೆ ಏಳಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ನೀರು ನೇರವಾಗಿ ಶುದ್ಧ ಕುಡಿಯುವ ನೀರಿನ ಮೂಲಕ್ಕೆ ಸೇರ್ಪಡೆಯಾಗುತ್ತಿದೆ. ಪುಟ್ಟನಮನೆ ಹಾಗೂ ಕೆರೆಗುಂಡಿ ಪ್ರದೇಶದಲ್ಲಿ ನೇರವಾಗಿ ಕೃಷಿ ಜಮೀನಿನಲ್ಲಿ ಈ ತ್ಯಾಜ್ಯ ನೀರು ಹರಿದು ಹೋಗುತ್ತದೆ. ಬೇಸಿಗೆ ಕಾಲದಲ್ಲಿ ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿದ್ದರೆ, ಮಳೆಗಾಲದ ಸಂದರ್ಭದಲ್ಲಿ ಜಮೀನಿಗೆ ಕೊಳಚೆ ನೀರು ನುಗ್ಗಿ ಕೃಷಿ ಚಟುವಟಿಕೆ ಮಾಡಲಾಗದಂಥ ಸನ್ನಿವೇಶ ಎದುರಾಗುತ್ತದೆ. ಒಂದೊಮ್ಮೆ ಧೈರ್ಯ ಮಾಡಿ ಕೆಲಸ ಮಾಡಿದರೂ ಮೈಕೈ ತುರಿಕೆ, ಚರ್ಮ ರೋಗದಂಥ ಸಮಸ್ಯೆ ಎದುರಾಗುತ್ತದೆ. ವರ್ಷವಿಡೀ ಸೊಳ್ಳೆಗಳ ಕಾಟ ಇರುವುದರಿಂದ ವಿವಿಧ ರೋಗಗಳು ನಿರಂತರವಾಗಿ ಬಾಧಿಸುತ್ತವೆ. ಕಳೆದ ಶಿವರಾತ್ರಿಯಲ್ಲಿ ಇಲ್ಲಿನ ಈಶ್ವರ ದೇಗುಲದಲ್ಲಿ ಜಲಾಭಿಷೇಕ ನಡೆದ ವೇಳೆ ಅನಿವಾರ್ಯವಾಗಿ ಕೊಳಚೆ ಸೇರಿದ ನೀರನ್ನೇ ಅಭಿಷೇಕ ಮಾಡುವಂತಾಗಿತ್ತು’ ಎನ್ನುತ್ತಾರೆ ಸ್ಥಳೀಯರಾದ ರಾಘವ್ ಭಟ್. 

‘ಕೊಳಚೆ ನೀರು ಶುದ್ಧೀಕರಿಸಿ ಬಿಡಬೇಕು ಎಂಬ ನಿಯಮವಿದ್ದರೂ ಶಿರಸಿ ನಗರಸಭೆ ಯಾವುದೇ ಪ್ರಕ್ರಿಯೆ ಕೈಗೊಳ್ಳದೇ ಹಾಗೆಯೇ ನೇರವಾಗಿ ಬಿಡುತ್ತಿದೆ. ಈ ಬಗ್ಗೆ ಸಾಕಷ್ಟು ಹೋರಾಟ, ನ್ಯಾಯಾಲಯದಲ್ಲಿ ದಾವೆ, ಪ್ರತಿಭಟನೆ ನಡೆದರೂ ಯಾವುದಕ್ಕೂ ಕಿವಿಗೊಡುತ್ತಿಲ್ಲ. ನಗರ ತ್ಯಾಜ್ಯ ಹೊರಹಾಕಲು ಗ್ರಾಮೀಣ ಜನರನ್ನು ಬಲಿಕೊಡುವುದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು. 

‘ನಗರಸಭೆ ವ್ಯಾಪ್ತಿಯಲ್ಲಿ ಒಂದು ಕಡೆ ತ್ಯಾಜ್ಯ ನೀರು ಶೂದ್ಧೀಕರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಉಳಿದೆಡೆ ನಿರ್ಮಿಸಲು  ಅನುದಾನದ ಕೊರತೆಯಿದೆ. ಹೀಗಾಗಿ ನಗರಸಭೆಯವರೂ ಅನಿವಾರ್ಯವಾಗಿ ನೇರವಾಗಿ ತ್ಯಾಜ್ಯ ನೀರು ಹೊರಬಿಡುವಂತಾಗಿದೆ. ಸರ್ಕಾರದಿಂದ ಅನುದಾನ ಲಭ್ಯವಾದರೆ ಇಂಥ ಘಟಕಗಳ ನಿರ್ಮಾಣ ಸುಲಭ’ ಎಂಬುದು ನಗರಾಡಳಿತದ ಅಧಿಕಾರಿಗಳ ಸಮಜಾಯಿಷಿ. 

ಗ್ರಾಮೀಣ ಪರಿಸರ ವ್ಯವಸ್ಥೆಯನ್ನು ನಗರ ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ ನಗರ ವ್ಯಾಪ್ತಿಯಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳು ಅತ್ಯಗತ್ಯ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕ.
ಪಿ.ಎಸ್.ಹೆಗಡೆ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT