ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕೃಷಿ ಸಂಜೀವಿನಿ ವಾಹನಗಳ ಮೇಲೆ ಕಾರ್ಯ‘ಭಾರ’!

Published 1 ಫೆಬ್ರುವರಿ 2024, 5:17 IST
Last Updated 1 ಫೆಬ್ರುವರಿ 2024, 5:17 IST
ಅಕ್ಷರ ಗಾತ್ರ

ಶಿರಸಿ: ಕೃಷಿ ಸಂಜೀವಿನಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾದ ವಾಹನದ ಮೇಲಿನ ಕಾರ್ಯಭಾರ ಹೆಚ್ಚಿದೆ. ಇದರಿಂದ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ಬೆಳೆಗಳ ಮಾಹಿತಿ ಹಾಗೂ ಮಣ್ಣು ಪರೀಕ್ಷೆ ವರದಿ ನೀಡಲು ವಿಳಂಬ ಆಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ.

2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೀಟ, ರೋಗ, ಕಳೆ, ಪೋಷಕಾಂಶಗಳ ಕೊರತೆ ಮತ್ತು ಮಣ್ಣು ಆರೋಗ್ಯದ ಕುರಿತು ರೈತರ ಜಮೀನಿನಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.

ರೈತರು ಸಾಮಾನ್ಯವಾಗಿ ಒಂದೆಡೆ ಸೇರುವ ಜಾಗಗಳಲ್ಲಿ ಉಪಯುಕ್ತವಾಗುವ ವಿಷಯಗಳ ಬಗ್ಗೆ ಮಾಹಿತಿಯನ್ನು ಛಾಯಾಚಿತ್ರ ಹಾಗೂ ವಿಡಿಯೊಗಳ ಮೂಲಕ ತೋರಿಸುವ ವ್ಯವಸ್ಥೆಯನ್ನು ಕೃಷಿ ಸಂಜೀವಿನಿ ವಾಹನದಲ್ಲಿ ಮಾಡಲಾಗುತ್ತದೆ. ರೈತರ ಸಮ್ಮುಖದಲ್ಲಿಯೇ ಮಣ್ಣು ಪರೀಕ್ಷೆಯನ್ನು ತ್ವರಿತವಾಗಿ ಕೈಗೊಂಡು ಸೂಕ್ತ ಮಣ್ಣು ನಿರ್ವಹಣಾ ಕ್ರಮಗಳ ಮಾಹಿತಿ ಒದಗಿಸಲು ಮಣ್ಣು ಪರೀಕ್ಷಾ ಸಾಧನೆಗಳನ್ನು ವಾಹನದಲ್ಲಿ ಅಳವಡಿಸಲಾಗಿದೆ. ಜತೆಗೆ ರಸಗೊಬ್ಬರಗಳ ನಕಲಿ ಅಥವಾ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಪತ್ತೆಹಚ್ಚಿ ಗುಣಮಟ್ಟದ ರಸಗೊಬ್ಬರಗಳ ಬಗೆಗೂ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಆದರೆ ಎಲ್ಲ ತಾಲ್ಲೂಕುಗಳಿಗೆ ಈ ವಾಹನಗಳ ವ್ಯವಸ್ಥೆ ಇಲ್ಲದಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. 

ರೈತರು ತಮ್ಮ ಭೂಮಿಯ ಮಣ್ಣನ್ನು ಪ್ರಯೋಗಾಲಯಗಳಿಗೆ ತೆರಳಿ ಅಲ್ಲಿ ಪರೀಕ್ಷೆ ನಡೆಸಿ ವರದಿ ಪಡೆದುಕೊಳ್ಳಬೇಕಾಗಿತ್ತು. ಆದರೆ ರೈತರು ಸಹಾಯವಾಣಿ 155313 ಸಂಖ್ಯೆಗೆ ಕರೆ ಮಾಡಿ ತಾಲ್ಲೂಕು, ಊರಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿದರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ನೀಡುತ್ತಾರೆ. ಇದಕ್ಕೆಂದೇ ಪ್ರತ್ಯೇಕ ವಾಹನವೂ ಇದ್ದು, ಈ ವಾಹನದಲ್ಲಿ ಒಬ್ಬ ನುರಿತ ಕೃಷಿ ಅಧಿಕಾರಿ ಹಾಗೂ ಸಿಬ್ಬಂದಿ ಇರುತ್ತಾರೆ. ಇಂಥ ರೈತಪರ ಯೋಜನೆಯಡಿ ಶಿರಸಿ ಹಾಗೂ ಯಲ್ಲಾಪುರಕ್ಕೆ ಒಂದೊಂದು ವಾಹನ ನೀಡಲಾಗಿದೆ. ಯಲ್ಲಾಪುರದ ಕೃಷಿ ಸಂಜೀವಿನಿ ವಾಹನ ಆ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದೆ. ಇನ್ನುಳಿದ ತಾಲ್ಲೂಕುಗಳಿಗೆ ಶಿರಸಿಯಲ್ಲಿರುವ ವಾಹನವೇ ಹೋಗಿ ರೈತರಿಗೆ ಪರಿಹಾರ ಒದಗಿಸಬೇಕಿದೆ.

‘ವಾರ್ಷಿಕವಾಗಿ 2,800ಕ್ಕೂ ಹೆಚ್ಚು ದೂರವಾಣಿ ಕರೆಗಳು ಬರುತ್ತವೆ. ಅವುಗಳಲ್ಲಿ ಸುಮಾರು 2 ಸಾವಿರ ಕರೆಗಳನ್ನು ಆಧರಿಸಿ ರೈತರ ಕ್ಷೇತ್ರ ಭೇಟಿ ಆಗುತ್ತದೆ. ಹೆಚ್ಚುವರಿ ಕರೆಗಳು ಬರುವ ಸಾಧ್ಯತೆಯೂ ಇದ್ದು, ಎಲ್ಲವುಗಳನ್ನು ನಿಭಾಯಿಸಲು ಶಿರಸಿಯಲ್ಲಿರುವ ಒಂದು ವಾಹನದಿಂದ ಕಷ್ಟ’ ಎಂಬುದು ಯೋಜನೆಯ ಅಧಿಕಾರಿಗಳ ಮಾತು. 

‘ಹಲವು ಬಾರಿ ಸಂಪರ್ಕಿಸಿದರೂ ಪ್ರಯೋಜನ ಆಗುತ್ತಿಲ್ಲ. ಕೆಲವೊಮ್ಮೆ ವಾಹನ ದುರಸ್ತಿಗೆ ತೆರಳುತ್ತದೆ. ಇಂಥ ಸಂದರ್ಭದಲ್ಲಿ ರೈತರಿಗೆ ಅನಾನುಕೂಲ ಆಗುತ್ತದೆ. ಮಣ್ಣು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ’ ಎಂಬುದು ಜೊಯಿಡಾದ ಮನೋಜ ವೇಳಿಪ ಮಾತಾಗಿದೆ.

ಕೃಷಿ ಸಂಜೀವಿನಿ ಯೋಜನೆಯಡಿ ಸರ್ಕಾರ ಪ್ರತಿ ತಾಲ್ಲೂಕಿಗೆ ಒಂದರಂತೆ ವಾಹನ ನೀಡಿ ಇನ್ನಷ್ಟು ಬಲ ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ
ಗಣಪತಿ ಗೌಡ ಬನವಾಸಿ ಪ್ರಗತಿಪರ ರೈತ
ಸರ್ಕಾರದಿಂದ ಹೆಚ್ಚುವರಿ ವಾಹನ ನೀಡಿದರೆ ಯೋಜನೆ ಇನ್ನಷ್ಟು ವೇಗ ಸಿಗಲಿದೆ
ಎಚ್.ನಟರಾಜ ಕೃಷಿ ಇಲಾಖೆ ಉಪನಿರ್ದೇಶಕ ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT