ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘದ ತಿರುಗಾಟದ ಅಂಗವಾಗಿ ನಗರದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಎರಡು ದಿನ ಪ್ರದರ್ಶನಗೊಂಡ ಎರಡು ನಾಟಕಗಳು ಸಮಕಾಲೀನದ ಸ್ಪರ್ಶವಿರುವ ಕಥಾಕೋಶದಿಂದಾಗಿ ಗಮನ ಸೆಳೆದವು.

ಸ್ಥಳೀಯ ಸಂಗಾತಿ ರಂಗಭೂಮಿ, ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆರಂಭವಾದ ನಾಟಕೋತ್ಸವವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಸಹಕಾರಿ ಧುರೀಣ ಆರ್.ಎನ್. ನಾಯಕ, ನೀನಾಸಂ ನಾಟಕಗಳು ಬೌದ್ಧಿಕ ಚಿಂತನೆಗೆ ತೊಡಗಿಸುವ ಗುಣ ಹೊಂದಿವೆ ಎಂದರು.

ಪ.ಪಂ. ಅಧ್ಯಕ್ಷ ಭಾಸ್ಕರ ನಾರ್ವೇಕರ, ತಾಮೀರ್ ಸೊಸೈಟಿಯ ಅನ್ವರ್ ಮುಲ್ಲಾ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ. ನಾಯಕ, ಬಿಇಒ ನಾಗರಾಜ ನಾಯಕ, ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಸಂಘಟಕ ಕೆ. ರಮೇಶ, ನೀನಾಸಂ ತಂಡದ ಮಧುಸೂದನ ಉಪಸ್ಥಿತರಿದ್ದರು. ಜಗದೀಶ ನಾಯಕ ಸ್ವಾಗತಿಸಿದರು. ಕೃಷ್ಣ ನಾಯ್ಕ ನಿರೂಪಿಸಿದರು.

ಸಾಹಿತಿ ವಿವೇಕ ಶಾನಭಾಗ ಅವರ ಕತೆಯನ್ನು ಆಧರಿಸಿದ `ಕಂತು~ ನಾಟಕದಲ್ಲಿ ಸೂರ್ಯಗ್ರಹಣದ ಭೀತಿಗೆ ಒಳಗಾಗುವ ಮಾವಿನಪುರ ಗ್ರಾಮ, ಕ್ರಮೇಣ ಅಣೆಕಟ್ಟೆಗೆ ಮುಳುಗಡೆಯಾಗುವ ಸನ್ನಿವೇಶಕ್ಕೆ ಒಳಗಾಗುತ್ತದೆ. ಈ ಹಂತದಲ್ಲಿ ವಿಜ್ಞಾನ ಮತ್ತು ಮೂಢನಂಬಿಕೆಗಳ ನಡುವೆ ಗ್ರಹಣದ ಕುರಿತ ಚರ್ಚೆ ಹಗ್ಗಜಗ್ಗಾಟದಲ್ಲಿ ಗ್ರಾಮಸ್ಥರು ತೊಡಗುತ್ತಾರೆ. ಮುಳುಗಡೆಯ ಲಾಭ ಪಡೆಯಲು ಕೆಲವರು ತೊಡಗಿದರೆ, ಅಣೆಕಟ್ಟು ನಿರ್ಮಾಣವನ್ನು ತಡೆಯುವುದಾಗಿ ಬರುವ ಪರಿಸರವಾದಿಗಳು, ಸ್ಥಳೀಯರಿಗೆ ಪರಕೀಯರಾಗಿ ಕಾಣಿಸಿಕೊಳ್ಳುತ್ತಾರೆ.

ಆಧುನಿಕ ಅಭಿವೃದ್ಧಿ ಮೀಮಾಂಸೆಯ ಕುರಿತು ಗ್ರಾಮಸ್ಥರು ಹೊಂದಿರುವ ಅಸಹನೆಯನ್ನು ಯಥಾರ್ಥವಾಗಿ ಬಿಂಬಿಸಲು ನಿರ್ದೇಶಕ ಚೆನ್ನಕೇಶವ ಯಶಸ್ವಿಯಾಗಿದ್ದಾರೆ. ವಿಜ್ಞಾನದ ವಕ್ತಾರನಂತೆ ಹಳ್ಳಿಯ ಶಿಕ್ಷಕರೊಬ್ಬರನ್ನು, ಅದಕ್ಕೆ ಪ್ರತಿಯಾಗಿ ಕಂದಾಚಾರದ ಸಂಕೇತವಾಗಿ ಪುರೋಹಿತನೊಬ್ಬನನ್ನು ತರಲಾಗಿತ್ತು. ಶಿಕ್ಷಕ, ಪುರೋಹಿತರಿಬ್ಬರೂ ಗ್ರಾಮೀಣ ಸಂಸ್ಕೃತಿಯ ಅಭಿನ್ನ ಧಾತುಗಳಾಗಿರುತ್ತಾರೆ ಎಂಬುದನ್ನು ಗುರುತಿಸಬೇಕಾಗಿತ್ತು. ಜಮೀನ್ದಾರಿಕೆ ಕಳೆದುಕೊಂಡ ಕುಟುಂಬದ ಯಜಮಾನಿಯ ಪಾತ್ರದಲ್ಲಿ ಸೂರ್ಯ, ಬುಗುರಿಯ ಪಾತ್ರದಲ್ಲಿ ಚಂದ್ರಹಾಸ ಭಂಡಾರಿ ಮಿಂಚಿದ್ದಾರೆ.

ಮಲೆಯಾಳಂ ಸಾಹಿತ್ಯದ ದಿಗ್ಗಜ ವೈಕಂ ಮಹಮ್ಮದ್ ಬಶೀರ್ ಅವರ ವಿವಿಧ ಕತೆಗಳನ್ನು ಆಧಾರವಾಗಿಟ್ಟುಕೊಂಡು ರಂಗರೂಪ ನೀಡಿದ ರಾಜೀವ ಕೃಷ್ಣನ್ ನಿರ್ದೇಶನದ `ನಮ್ಮಳಗಿನ ಬಶೀರ್~ ನಾಟಕವು ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಅನಾವರಣಗೊಳ್ಳುತ್ತದೆ. ಸ್ವಾತಂತ್ರ್ಯದ ಬೆಳಕಿನ ಕಿರಣಗಳು ಸೆರೆಮನೆಯ ಸರಳುಗಳ ಒಳಗೆ ಇಳಿಯುತ್ತಿದ್ದಂತೆ ಸಂತಸಗೊಳ್ಳುವ ಹೋರಾಟಗಾರರು ಸ್ವಾತಂತ್ರ್ಯೋತ್ತರ ಸಂದರ್ಭದ ವಾಸ್ತವ ಕುರಿತು ಕುತೂಹಲಗೊಳ್ಳುತ್ತಾರೆ.

ಕಳೆದುಹೋದ ಜೀವನ ಪ್ರೀತಿ, ಮತ ಧರ್ಮವನ್ನು ಮೀರಿದ ಮಾನವೀಯ ತುಡಿತಗಳು ನಾಟಕವನ್ನು ಆಪ್ತವಾಗಿಸುತ್ತವೆ. ಸೆರೆಮನೆಯಲ್ಲಿದ್ದಾಗ ಪಕ್ಕದ ಮಹಿಳಾ ಸೆಲ್ನಲ್ಲಿರುವ ನಾರಾಯಣಿ ಜೊತೆಗೆ ಕೇವಲ ಸಂಭಾಷಣೆ ರೂಪದಲ್ಲಿ ನಡೆಯುವ ಕಥಾ ನಾಯಕನ ಪ್ರೀತಿ, ನಂತರ ಅವಳನ್ನು ಕಾಣದೆ ಹೋದರೂ ಜೀವನ ಪರ್ಯಂತ ನದಿಯಂತೆ ಪ್ರವಹಿಸುತ್ತದೆ. ಸ್ವಾತಂತ್ರ್ಯವೂ ಕೂಡ ಪ್ರೀತಿಯಂತೆ ಅಮೂರ್ತ ಮತ್ತು ಅನುಭವ ಗಮ್ಯವಾದ ಸಂಗತಿ ಎಂಬಂತೆ ನಿರೂಪಿಸಲಾಗಿದೆ. ವೈಕಂ ಅವರ ನೈಜ ಜೀವನದ ಅಂಶಗಳು ಇಲ್ಲಿ ಹಾಸುಹೊಕ್ಕಾಗಿವೆ. ಕಲಾವಿದರಾದ ಚಂದ್ರಶೇಖರ, ಚೈತ್ರಾ ಗಣಪತಿ, ಜಯರಾಮ್ ಕೆ.ಎನ್, ಪ್ರಮೋದ, ಶಿಲ್ಪಾ ಮುಂತಾದವರು ಉತ್ತಮ ಅಭಿನಯ ನೀಡಿದರು.

ಸಿದ್ಧಲಿಂಗಸ್ವಾಮಿ ವಸ್ತ್ರದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.