ಮುಂಡಗೋಡ: ಕಣ್ಣು ಹಾಯಿಸಿದಷ್ಟು ದೂರ ಕಡುನೀಲಿ ಬಣ್ಣದ ನೀರು ಕಾಣಬೇಕಿದ್ದ ಪ್ರದೇಶದಲ್ಲಿ ಈಗ ನೀರವ ಮೌನ ಆವರಿಸಿದೆ.ಇದು ಅತ್ತಿವೇರಿ ಪಕ್ಷಿಧಾಮದ ಸ್ಥಿತಿ. ನೀರ ಮಧ್ಯಭಾಗದ ಗಿಡಗಂಟೆಗಳಲ್ಲಿ ಬಣ್ಣದ ಚಿತ್ತಾರ ಮೂಡಿಸುತ್ತಿರುವಂತೆ ಕಾಣಬೇಕಿದ್ದ ಜಾಗದಲ್ಲಿ, ಬೋಳು ಬೋಳಾಗಿರುವ ಗಿಡಗಂಟೆಗಳು, ಒಣಗಿದ ಭೂಮಿಯ ದರ್ಶನವಾಗುತ್ತಿದೆ.
ವಲಸೆ ಹಕ್ಕಿಗಳ ಕಲರವದ ಬದಲು, ಮುಖಕ್ಕೆ ಹೊಡೆದಂತೆ ಸುಂಯನೆ ಬೀಸುವ ಬಿಸಿ ಗಾಳಿ, ಬಿರುಕು ಬಿಟ್ಟಿರುವ ನೆಲ, ಬರಡಾಗಿರುವ ಭೂಮಿಯಲ್ಲಿ ಆಹಾರ ಹುಡುಕುತ್ತಿರುವ ಬಿಳಿ ಕೊಕ್ಕರೆಗಳ ದೃಶ್ಯ ಸಾಮಾನ್ಯವಾಗಿದೆ. ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಾಗಬೇಕಿದ್ದ ಪಕ್ಷಿಧಾಮದಲ್ಲಿ, ಬತ್ತಿದ ಕೆರೆಯಲ್ಲಿ ಒಣಗಿದ ಗಿಡಗಳ ಕಂಡಂತಾಗುತ್ತಿದೆ. ನಡುಗಡ್ಡೆಗಳು ಸದ್ಯದ ನೀರಿಗೆ ನೆಲೆ ಕಂಡುಕೊಂಡಂತಾಗಿವೆ.
ಸತತ ಎರಡು ವರ್ಷಗಳ ಕಾಲ ತಾಲ್ಲೂಕಿನಲ್ಲಿ ಆವರಿಸಿದ ಬರದ ಛಾಯೆ, ಅತ್ತಿವೇರಿ ಪಕ್ಷಿಧಾಮಕ್ಕೂ ತಟ್ಟಿದೆ. ಬರದ ಪಟ್ಟಿಗೆ ವಲಸೆ ಹಕ್ಕಿಗಳು ಸೇರ್ಪಡೆಗೊಂಡು, ತಾಲ್ಲೂಕಿಗೆ ಈ ವರ್ಷ ಬರುವು ಮುಂದೆ ಹಾಕಿದಂತಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30ರಷ್ಟು ಪಕ್ಷಿಗಳು ಸಹ ಪಕ್ಷಿಧಾಮಕ್ಕೆ ವಲಸೆ ಬಂದಿಲ್ಲ. ಸುಮಾರು ಐದಾರು ತಿಂಗಳ ಕಾಲ ಅತ್ತಿವೇರಿ ಪಕ್ಷಿಧಾಮದಲ್ಲಿ, ದೇಶಿ ಹಾಗೂ ವಿದೇಶಿ ಹಕ್ಕಿಗಳು ವಲಸೆ ಬಂದು ಸಂತಾನಾಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತಿದ್ದವು. ಆದರೆ ಬರದ ಕರಿನೆರಳಿನಿಂದ ನೀರಿಲ್ಲದೆ ಸೊರಗಿರುವ ಪಕ್ಷಿಧಾಮದ ಜಲಾಶಯದಲ್ಲಿ, ಕಳೆದ ಐದು ತಿಂಗಳ ಅವಧಿಯಲ್ಲಿ ದೇಶಿ ಹಕ್ಕಿಗಳು ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿ ಬಂದಿವೆ. ಕಳೆದ ಒಂದು ದಶಕದ ಅವಧಿಯಲ್ಲಿ, ಇದೇ ಮೊದಲ ಬಾರಿಗೆ ಪಕ್ಷಿಧಾಮ ಪಕ್ಷಿಗಳಿಂದ ದೂರವಾಗಿದೆ ಎನ್ನಲಾಗುತ್ತಿದೆ.
‘ಸುಮಾರು 40–45 ರಷ್ಟು ಜಾತಿಯ ವಿದೇಶಿ ಹಕ್ಕಿಗಳು ಸಾಮಾನ್ಯವಾಗಿ ಈ ಪಕ್ಷಿಧಾಮಕ್ಕೆ ವಲಸೆ ಬರುತ್ತಿದ್ದವು. ಆದರೆ ಕಳೆದ ಅಕ್ಟೋಬರ್ನಿಂದ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಹಕ್ಕಿಗಳು ಕಾಣಿಸಿಕೊಂಡು, ತಿಂಗಳು ಮುಗಿಯುವದರೊಳಗೆ ಬೇರೆಡೆ ವಲಸೆ ಹೋಗಿವೆ. ಪ್ರತಿ ವರ್ಷ ಮಾರ್ಚ್ ಅಂತ್ಯದವರೆಗೂ ಹೆಚ್ಚಿನ ಸಂಖ್ಯೆಯಲ್ಲಿ, ಅತ್ತಿವೇರಿ ಜಲಾಶಯದಲ್ಲಿ ದೇಸಿ, ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತಿರುವುದು ಅಂಕಿ ಸಂಖ್ಯೆಗಳಿಂದ ಕಂಡುಬರುತ್ತಿದೆ. ಆದರೆ ಈ ವರ್ಷ ಮಾತ್ರ ಅದಕ್ಕೆ ಅಪವಾದವೆಂಬಂತೆ, ಬಿಳಿ ಕೊಕ್ಕರೆ ಬಿಟ್ಟರೆ ಮತ್ಯಾವ ವಲಸೆ ಹಕ್ಕಿಗಳು ಕಂಡುಬಂದಿಲ್ಲ’ ಎಂದು ಪಕ್ಷಿಧಾಮದ ಫಾರೆಸ್ಟರ್ ಸಂತೋಷ ಕೂಡ್ಲಿಗಿ ಹೇಳಿದರು.
‘ವಲಸೆ ಹಕ್ಕಿಗಳಾದ, ನೀಲಿ ರೆಕ್ಕೆಯ ಬಾತು, ಇಂಡಿಯನ್ ಶಾಗ್, ಬ್ರಾಹ್ಮಿಣಿ ಶೆಲ್ಡಕ್, ಲಿಟ್ಲ್ ರಿಂಗ್ಡ್ ಪ್ಲೋವರ್, ಮಾರ್ಶ್ ಹ್ಯಾರಿಯರ್ ವ್ಯಾಗ್ಟೇಲ್, ಗಾರ್ಗನಿ, ನಾರ್ದನ್ ಪಿನ್ ಟೇಲ್ ಸೇರಿದಂತೆ ಹಲವು ಹಕ್ಕಿಗಳು ಇಲ್ಲಿಗೆ ಬರುತ್ತಿದ್ದವು. ಆದರೆ ನೀರಿಲ್ಲದ ಕಾರಣ ವಲಸೆ ಹಕ್ಕಿಗಳು ಇತ್ತ ಕಡೆ ಸಂಚಾರ ಮಾಡಿಲ್ಲ’ ಎಂದು ಪಕ್ಷಿಪ್ರಿಯ ಹರಿಹರದ ಜೆ.ಶಶಿಕಾಂತ ಹೇಳಿದರು.
ಶಾಂತೇಶ ಬೆನಕನಕೊಪ್ಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.