ಕಾರವಾರ: ಸಮಾಜಘಾತುಕ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 15 ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸಿದೆ.ಜಿಲ್ಲಾ ಕೇಂದ್ರವಾದ ಕಾರವಾರ ನಗರವು ಅಭಿವೃದ್ಧಿಯ ಮಗ್ಗುಲಿಗೆ ಹೊರಳುತಿದ್ದು, ಕಳೆದ ಕೆಲ ವರ್ಷಗಳಿಂದೀಚೆಗೆ ಅನೇಕ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ತಲೆಎತ್ತುತ್ತಿವೆ. ಜನಸಂಖ್ಯೆ ಹೆಚ್ಚುತ್ತಿರುವ ಜತೆಗೆ ಅಪರಾಧ ಕೃತ್ಯಗಳು ತುಸು ಅಧಿಕ ವಾಗುತ್ತಿದೆ. ಸರ ಅಪಹರಣ, ದರೋಡೆ, ಮಟ್ಕಾ, ಅಕ್ರಮ ಮದ್ಯ ಸಾಗಣೆ ಹಾಗೂ ಗಾಂಜಾ ಮಾರಾಟ ದಂಧೆಯಂಥ ಪ್ರಕರಣಗಳು ನಗರ ಠಾಣೆಯಲ್ಲಿ ದಾಖಲಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಈ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಪೊಲೀಸರ ನೆರವಿಗೆ ಬರಲಿದೆ.