ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಮರಗಳಿಂದ ಭಗೀರಥನ ಕಾರ್ಯ

Last Updated 25 ಏಪ್ರಿಲ್ 2017, 5:51 IST
ಅಕ್ಷರ ಗಾತ್ರ

ಶಿರಸಿ: ಗಿಡ–ಮರಗಳು ಪರಾಗಗಳ ಮೂಲಕ ಸಂಕೇತಗಳನ್ನು ಕಳುಹಿಸಿ ಆಕಾಶದಲ್ಲಿರುವ ನೀರನ್ನು ಭೂಮಿಗೆ ತರುತ್ತವೆ. ಇವು ಮಾಡುವ ಭಗೀರಥನ ಕೆಲಸ ಮನುಷ್ಯರಿಂದಲೂ ಆಗಬೇಕು. ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಬೇಕು ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಹೇಳಿದರು.ಶಿರಸಿ ಜೀವಜಲ ಕಾರ್ಯಪಡೆ ಇಲ್ಲಿನ ಆನೆಹೊಂಡದ ನಿಸರ್ಗ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಂತರ್ಜಲ ಕುಸಿತದ ಅಪಾಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಭೂಮಿಯಲ್ಲಿ ಹೂತಿರುವ ವಿಷಕಾರಿ ಪೆಟ್ರೋಲಿಯಂ ಅನ್ನು ನಾವು ಮಿತಿಯಿಲ್ಲದೇ ತೆಗೆಯುತ್ತಿದ್ದೇವೆ. ಪೆಟ್ರೋ ಲಿಯಂ ಉತ್ಪನ್ನ ಇಲ್ಲದಿದ್ದರೆ ಮನುಷ್ಯನ ಜೀವನ ಕ್ರಮವೇ ಸ್ತಬ್ಧಗೊಳ್ಳ ಬಹುದಾ ದಷ್ಟು ಅವಲಂಬಿಸಿದ್ದೇವೆ. ಆದರೆ ಭೂಮಿಯ ಮೇಲಿರುವ ನಿಜವಾದ ದ್ರವ ನೀರು. ಪೆಟ್ರೋಲಿಯಂಗೆ ನೀಡುವ ಪ್ರಾಧಾನ್ಯತೆಯನ್ನು ನಾವು ನೀರಿಗೆ ನೀಡಬೇಕು. ಎಲ್ಲ ಪ್ರಕಾರದ ಮಾಧ್ಯಮಗಳ ಮೂಲಕ ನೀರಿನ ಮಹತ್ವದ ಜಾಗೃತಿ ಕಾರ್ಯ ನಡೆಯಬೇಕು’ ಎಂದರು.

‘ಬಹು ವಿಧವಾದ ಗುಣಗಳನ್ನು ಹೊಂದಿರುವ ನೀರು ಭೂಮಿಯ ಮೇಲಿನ ಸರ್ವಶ್ರೇಷ್ಠ ದ್ರವವಾಗಿದೆ. ಇದಕ್ಕೆ ಮೇಲ್ಮುಖ ಹಾಗೂ ಕೆಳಮುಖವಾಗಿ ಹರಿಯುವ, ಜಾರುವ, ಅಂಟುವ ಎಲ್ಲ ಗುಣಗಳಿವೆ. ಕಲ್ಲನ್ನು ಕರಗಿಸುವ, ಇದನ್ನು ರೂಪಿಸುವ ಸ್ವಭಾವ ನೀರಿಗೆ ಇದೆ. ನಿಸರ್ಗದ ಶಕ್ತಿಗಳು ನೀರಿನ ಸಹಾಯದಿಂದ ಭೂಮಿಯನ್ನು ಅದ್ಭುತ ಶಿಲ್ಪವಾಗಿ ರೂಪಿಸಿದೆ. ಸಹಸ್ರಾರು ವರ್ಷಗಳ ಈ ವಿಕಾಸ ಕ್ರಮದ ಪರ ಮೋಚ್ಚ ಜೀವಿಯಾಗಿ ಬಂದ ಮನುಷ್ಯ ಎಲ್ಲ ವ್ಯವಸ್ಥೆಯನ್ನೂ ಅಧ್ವಾನ ಮಾಡಿ ದ್ದಾನೆ. ಆಸೆಬುರುಕತನ, ಕಡಲ್ಗಳ್ಳತನ ದಿಂದಾಗಿ ಭೂಮಿಯಲ್ಲಿ ಹೂತಿಟ್ಟಿರುವ ಎಲ್ಲ ಅಸುರಕ್ಷಿತ ಪದಾರ್ಥಗಳನ್ನು ಹೊರ ತೆಗೆಯುತ್ತಿದ್ದಾನೆ. ಈಗ ಜೀವಜಲಕ್ಕೆ ಕನ್ನ ಹಾಕಿ ವಿರಾಟ್ ವಿಕೃತಿಯನ್ನು ಸೃಷ್ಟಿ ಮಾಡಿದ್ದಾನೆ’ ಎಂದು ವಿಷಾದಿಸಿದರು. 

‘ಜೀವಜಂತುಗಳೇ ಈ ಭೂಮಿಗೆ ನಿಷ್ಠೆಯನ್ನು ತೋರಿ ರಕ್ಷಣೆ ಮಾಡುತ್ತಿವೆ. ಈ ನಿಷ್ಠೆಯಿಂದಾಗಿಯೇ ಮಳೆ ಬಂದು ನಮಗೆ ಕುಡಿಯಲು ನೀರು ಸಿಗುತ್ತದೆ. ಮನುಷ್ಯ ಸಹ ಬಾಲ್ಯಾವಸ್ಥೆಯಲ್ಲಿ ನಿಸರ್ಗದ ಅತ್ಯಂತ ಶ್ರೇಷ್ಠ ಜೀವಿಯಾಗಿರುತ್ತಾನೆ. ಚಿಕ್ಕ ಮಕ್ಕಳು ಸದಾ ಪ್ರಾಣಿ ಪಕ್ಷಿಗಳು, ಜೀವಜಂತುಗಳು, ಮಣ್ಣಿನೊಂದಿಗೆ ಪ್ರೀತಿ ಹೊಂದಿರುತ್ತಾರೆ. ನಾವು ಹಿರಿಯರು ಮಕ್ಕಳನ್ನು ನಿಸರ್ಗದಿಂದ ಬೇರ್ಪಡಿಸುತ್ತೇವೆ. ಆಧುನಿಕ ಶಿಕ್ಷಣ, ಜೀವನ ಕ್ರಮದ ಪರಿಣಾಮ ಪರಿಸರವನ್ನು ದೂರಸರಿಸಿ ಬೇಡದ ವಸ್ತುಗಳನ್ನು ಅತ್ಯಮೂಲ್ಯ ಎಂಬ ಭ್ರಮೆ ಸೃಷ್ಟಿಸುತ್ತೇವೆ. ನೈಸರ್ಗಿಕ ಸಂಪತ್ತನ್ನು ವಿನಾಶಕ್ಕೆ ಕೊಂಡೊಯ್ದಿರುವ ನಾವು ಈಗ ನೀರಿಗೆ ಕನ್ನ ಹಾಕುತ್ತಿದ್ದೇವೆ’ ಎಂದು ಮಾರ್ಮಿಕವಾಗಿ ನುಡಿದರು.
ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಕಾರ್ಯದರ್ಶಿ ಅನಿಲ್ ನಾಯಕ ಉಪಸ್ಥಿತರಿದ್ದರು. ಜಲ ಕಾರ್ಯಕರ್ತ ಶಿವಾನಂದ ಕಳವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಂ. ಭಟ್ಟ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT