ಹೆಚ್ಚಾಗಿ ಕಲ್ಲು ಬಂಡೆಯೇ ತುಂಬಿರುವ ಚಿತ್ರಿಗಿ ಅರಣ್ಯದ ಈ ಎತ್ತರ ಪ್ರದೇಶದಲ್ಲಿ ಹಿಂದೆ ಸ್ಥಳೀಯ ಪುರಸಭೆ ಒಂದು ಉದ್ಯಾನವನ ರೂಪಿಸುವ ಪ್ರಯತ್ನ ನಡೆಸಿತ್ತು. ಆದರೆ ವ್ಯವಸ್ಥಿತ ಯೋಜನೆ, ಅನುಷ್ಠಾನ, ಹಣಕಾಸು ತೊಂದರೆಯ ಕಾರಣದಿಂದ ಅದು ಮುಂದುವರಿಯಲಿಲ್ಲ. ಅದೇ ಜಾಗದಲ್ಲಿ ಈಗ ಅರಣ್ಯ ಇಲಾಖೆ ‘ಟ್ರೀ ಪಾರ್ಕ್’ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಸಸ್ಯೋದ್ಯಾನದಲ್ಲಿ ಆಲ, ರಕ್ತಚಂದ, ನಾಗಲಿಂಗ ಪುಷ್ಪ, ನಾಗಬೆತ್ತ, ಹಾಲಬೆತ್ತ, ಹಂದಿ ಬೆತ್ತ ( ಪೊಲೀಸ್ ಲಾಠಿಗೆ ಬಳಸುವುದು), ಶ್ರೀಗಂಧ, ಬೀಟೆ, ಸಾಗುವಾನಿ, ಕಿಂದಾಳ, ಮತ್ತಿ, ಹೊನಗಲು, ನಂದಿ, ಹೊನ್ನೆ, ಬೆಟ್ಟೊನ್ನೆ, ಮಾವು, ಹಲಸು, ಬರಣಗಿ, ರಾಮಪತ್ರೆ, ಮುರುಗಲು, ಬಿಳಿ ಮುರುಗಲು ಸೇರಿ ಸುಮಾರು 70 ಜಾತಿಯ ಕಾಡು ಗಿಡಗಳನ್ನು ಬೆಳೆಸಲಾಗಿದೆ. ಪ್ರವೇಶ ದ್ವಾರದ ಒಳಗೆ ಬದಿಯಲ್ಲಿ ಪುಟ್ಟ ‘ನವಗ್ರಹ ವನ’ವನ್ನು ನಿರ್ಮಿಸಲಾಗಿದೆ.