ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತೆಗೆದ ಜಾಗದಲ್ಲಿ ತುಂಬಿದ ಜೀವಜಲ

Last Updated 3 ಜೂನ್ 2017, 6:42 IST
ಅಕ್ಷರ ಗಾತ್ರ

ಹೊನ್ನಾವರ: ರಾಮತೀರ್ಥದ ಸಮೀಪವಿರುವ ಇತಿಹಾಸ ಪ್ರಸಿದ್ಧ ಅರೆಸಾಮಿ ಕೆರೆಯಲ್ಲಿ ಇದೀಗ ಜೆಸಿಬಿ ಯಂತ್ರದ ಸದ್ದು ಜೋರಾಗಿದ್ದು, ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ.

ಸುಮಾರು 40 ಎಕರೆಯಷ್ಟು ವಿಸ್ತೀರ್ಣವಿರುವ ಅರೆಸಾಮಿ ಕೆರೆ ಮೇ ತಿಂಗಳಿನ ಬಿರು ಬಿಸಿಲಿಗೆ ಬತ್ತಿ ಹೋಗಿ ತನ್ನ ದುಃಸ್ಥಿತಿಯನ್ನು ನಿವಾರಿಸಲು ಮೊರೆಯಿಡುವಂತೆ ಕಾಣುತ್ತಿತ್ತು. ಇದೀಗ ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಡಿ ಈ ಕೆರೆಯ ಹೂಳು ತೆಗೆಯಲು ₹10 ಲಕ್ಷ ಮಂಜೂರಾಗಿದ್ದು ಹೂಳು ತೆಗೆಯುವ ಪ್ರಕ್ರಿಯೆ ಆರಂಭಗೊಂಡಿದೆ.

ಜಿಲ್ಲಾ ಪಂಚಾಯ್ತಿಯ ಎಂಜಿನಿಯರಿಂಗ್ ವಿಭಾಗದಿಂದ ಮಣ್ಣು ತೆಗೆಯಲು ಟೆಂಡರ್ ನೀಡಲಾಗಿದ್ದು ಮಣ್ಣು ತೆಗೆಯಲು ಆರಂಭಿಸಿದ ಎರಡೇ ದಿನಗಳಲ್ಲಿ ಕೆರೆಯಲ್ಲಿ ಮಣ್ಣು ತೆಗೆದ ಭಾಗದಲ್ಲಿ ಸುಮಾರು 2 ಅಡಿಯಷ್ಟು ನೀರು ನಿಂತು ಮುಂದೆ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದಲ್ಲಿ ಬೇಸಿಗೆಯಲ್ಲೂ ನೀಲ ರಾಶಿಯಿಂದ ನಳನಳಿಸಬಹುದೆಂಬ ಅಶಾಭಾವನೆ ಗರಿಗೆದರುವಂತೆ ಮಾಡಿದೆ.

ರಾಜ್ಯವ್ಯಾಪಿ ಜಾರಿಗೆ ಬಂದಿರುವ ಕೆರೆ ಸಂಜೀವಿನಿ ಯೋಜನೆಯ ಕೆಲ ನಿಯಮಗಳು ಸ್ಥಳೀಯವಾಗಿ ಕೆಲ ತೊಡಕುಗಳಿಗೆ ಕಾರಣವಾಗಿದ್ದು ಅರೆಸಾಮಿ ಕೆರೆಯ ಹೂಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೂಡ ಇದು ತೊಡರುಗಾಲಾಗಿದೆ ಎನ್ನಲಾಗಿದೆ. ಯೋಜನೆಯಡಿ ಜೆಸಿಬಿಯಿಂದ ಹೂಳೆತ್ತಲು ಅವಕಾಶ ನೀಡಲಾಗಿದ್ದು ಎತ್ತಿದ ಮಣ್ಣನ್ನು ಬೇರೆಡೆ ಸಾಗಿಸಲು ಹಣ ನೀಡಿಲ್ಲ.

‘ಅರೆಸಾಮಿ ಕೆರೆಯಿಂದ ಮೇಲೆತ್ತಲಾಗಿರುವ ಮಣ್ಣನ್ನು ಬೇರೆಡೆಗೆ ಸಾಗಿಸಲು ಹಣಕಾಸಿನ ಕೊರತೆ ಎದುರಾಗಿದೆ. ಕೆರೆಯಿಂದ ತೆಗೆದ ಮಣ್ಣನ್ನು ರೈತರು ಕೊಂಡೊಯ್ಯಲು  ಯೋಜನೆಯಲ್ಲಿ ಅವಕಾಶವಿದೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ವಿ. ಹೆಗಡೆ ತಿಳಿಸಿದರು.

ಮಣ್ಣನ್ನು ತೆಗೆಯಲು ಗುತ್ತಿಗೆ ಪಡೆದಿರುವವರು ಇದನ್ನು ಕೆರೆಯ ಏರಿಯ ಮೇಲೆ ಹಾಕುತ್ತಿದ್ದು ಈ ಮಣ್ಣು ಮಳೆ ಬಿದ್ದರೆ ಮತ್ತೆ ಕೆರೆಗೆ ಬಂದು ಅಲ್ಲಿಯ ಆಳದಲ್ಲಿ ಸೇರಿಕೊಳ್ಳುವ ಆತಂಕ ಎದುರಾಗಿದೆ.

‘ಕೆರೆಯಿಂದ ಮಣ್ಣನ್ನು ತೆಗೆಯುತ್ತಿರುವುದು ಒಳ್ಳೆಯ ಕೆಲಸ. ಆದರೆ ಅದನ್ನು ದೂರ ಸಾಗಿಸಬೇಕು. ಈಗ ತೆಗೆದ ಮಣ್ಣು ಮತ್ತೆ ಮಳೆಗಾಲದಲ್ಲಿ ಕೆರೆ ಸೇರಿದರೆ ಸರ್ಕಾರದ ಹಣ ವ್ಯರ್ಥ ಪೋಲಾದಂತೆ. ಕೆರೆಯ ಶಾಶ್ವತ ಅಭಿವೃದ್ಧಿಯಾಗಬೇಕು’ ಎಂದು ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎಲ್.ಎಂ.ಭಟ್ಟ ರಾಮತೀರ್ಥ ಆಗ್ರಹಿಸುತ್ತಾರೆ.

ಕೆರೆಯಿಂದ ತೆಗೆದ ಮಣ್ಣು ಅಂಟಾಗಿರುವುದರಿಂದ ಅವುಗಳನ್ನು ಸಮೀಪದ ದೈವೀವನದ ಗಿಡಗಳಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ತಗ್ಗು ಪ್ರದೇಶಗಳಲ್ಲಿ ಈ ಮಣ್ಣನ್ನು ಸುರಿಯಬಹುದು. ಅರೆಸಾಮಿ ಕೆರೆಯ ಅಭಿವೃದ್ಧಿಗೆ ನಾನು ಸಂಪೂರ್ಣ ಸಹಕಾರ ನೀಡಲು ಉತ್ಸುಕನಾಗಿದ್ದೇನೆ’ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಅವರೊಂದಿಗೆ ಶುಕ್ರವಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಹೇಳಿದರು.

‘ಅರೆಸಾಮಿ ಕೆರೆಯ ಮಣ್ಣನ್ನು ಸಮೀಪದಲ್ಲೇ ಹಾಕುವುದರಿಂದ ಎದುರಾಗುವ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಇದನ್ನು ನಿವಾರಿಸಲು ಮಣ್ಣನ್ನು 3 ಕಿ.ಮೀ.ದೂರಕ್ಕೆ ಸಾಗಿಸುವಂತೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಎಲ್. ಚಂದ್ರಶೇಖರ ನಾಯಕ ಪ್ರಜಾವಾಣಿಗೆ ತಿಳಿಸಿದರು.

ಈ ನಡುವೆ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿದ್ದು ಇದರ ಅಂಗವಾಗಿ ಸೋಮವಾರ ಕೆರೆ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ಸಂಘಟಿಸಿದೆ.

**

ರಾಮತೀರ್ಥವನ್ನು ಒಂದು ಸುಂದರ ಪರಿಸರ ಪ್ರವಾಸಿ ತಾಣವಾಗಿ ಮಾಡಲು ಕೆರೆ ಅಭಿವೃದ್ಧಿಯಿಂದ ಸಾಧ್ಯ. ಇದಕ್ಕೆ ಸಹಕಾರ ಅಗತ್ಯ
-ಶಿವಾನಂದ ಹೆಗಡೆ ಕಡತೋಕಾ,
ಅಧ್ಯಕ್ಷರು, ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT