ಗುರುವಾರ , ಸೆಪ್ಟೆಂಬರ್ 19, 2019
24 °C

ವೈಭವದ ಉತ್ತರಾರಾಧನೆ

Published:
Updated:
Prajavani

ವಿಜಯಪುರ: ಶ್ರೀ ರಾಘವೇಂದ್ರ ಗುರುಸಾರ್ವಭೌಮರ 346ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಭಾನುವಾರ ಉತ್ತರಾರಾಧನೆಯು ಭಕ್ತಿಪೂರ್ವಕವಾಗಿ ಜರುಗಿತು.

ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಅಷ್ಟೋತ್ತರ ಬಳಿಕ 108 ಕಲಶಗಳಿಂದ ಫಲಪಂಚಾಮೃತ ಅಭಿಷೇಕ ಜರುಗಿತು.

ಬೆಳಿಗ್ಗೆ 10 ಗಂಟೆಗೆ ರಾಜಬೀದಿಗಳಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಭವ್ಯ ರಥೋತ್ಸವ ಜರುಗಿತು. ಹೂವಿನಿಂದ ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪ್ರಲ್ಹಾದರಾಜರ ಉತ್ಸವ ಮೂರ್ತಿ ಹಾಗೂ ಗುರು ಸಾರ್ವಭೌಮರ ಚಿತ್ರದ ಮೆರವಣಿಗೆ ಆಕರ್ಷಣೆ ಹೆಚ್ಚಿಸಿತು. ಜುಮನಾಳದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷ ಭೂಷಣ ತೊಟ್ಟು, ಸುಮಧುರ ಕಂಠದಿಂದ ಭಜನೆ ಮಾಡುತ್ತ, ಮೆರವಣಿಗೆಯುದ್ದಕ್ಕೂ ಭಕ್ತಿ ಭಾವ ಮೆರೆದರು.

ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ತರುತ್ತಿದ್ದಂತೆ ಭಕ್ತರು ಭಕ್ತಿ ಭಾವದಿಂದ ತಮ್ಮ ಶ್ರದ್ಧೆಯನ್ನು ಪ್ರದರ್ಶಿಸಿದರು. ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸುತ್ತಿದ್ದಂತೆಯೇ ಅದರ ಸುತ್ತಲೂ ತಾವು ಪ್ರದಕ್ಷಿಣೆ ಹಾಕಿದರು.

ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ನಂತರ ರಥಾಂಗ ಹೋಮ, ಅರ್ಚನೆ, ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು.

ಉತ್ತರಾರಾಧನೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು ವೃಂದಾವನದ ದರ್ಶನ ಪಡೆದು ಪುನೀತರಾದರು.

ಸೇವಾಕರ್ತ ಜಯತೀರ್ಥ ಕಿರಸೂರ, ಸಂತೋಷ ಕುಲಕರ್ಣಿ, ವಿ.ಬಿ.ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ, ಕಿರಣ ಜೋಶಿ (ಜುಮನಾಳಕರ), ಅಶೋಕ ದೀಕ್ಷಿತ್, ಅರವಿಂದ ಜೋಶಿ, ಶಂಭುಭಟ್ಟ ಜೋಶಿ, ಶಾಮಭಟ್ಟ ಜೋಶಿ ಇದ್ದರು.

ಉತ್ತರಾರಾಧನೆ ಪ್ರಯುಕ್ತ ಆ.19ರಂದು ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ ಅಂಗವಾಗಿ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, ಪವಮಾನ ಹೋಮ ನಡೆಯುವ ಮೂಲಕ ಪಂಚರಾತ್ರೋತ್ಸವ ಕೊನೆಗೊಳ್ಳಲಿದೆ.

Post Comments (+)