ಸೋಮವಾರ, ಜನವರಿ 24, 2022
29 °C

ಹೊಸ‍ಪೇಟೆ ನಗರಸಭೆ: ಎಎಪಿಯ ಒಬ್ಬರು, 8 ಜನ ಪಕ್ಷೇತರ ಸದಸ್ಯರು ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದ ಆಮ್‌ ಆದ್ಮಿ ಪಕ್ಷದ ಒಬ್ಬರು ಹಾಗೂ ಎಂಟು ಜನ ಪಕ್ಷೇತರ ಸದಸ್ಯರು ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ 9 ಜನ ಬಿಜೆಪಿ ಸೇರಿದರು.

ಇತ್ತೀಚೆಗೆ ನಗರಸಭೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರರು 12 ಸ್ಥಾನಗಳಲ್ಲಿ ಜಯಿಸಿದ್ದರು. ಬಿಜೆಪಿಯಿಂದ 10 ಜನ ಗೆದ್ದರೆ, ಎಎಪಿಯಿಂದ ಸ್ಪರ್ಧಿಸಿದ್ದ ಶೇಕ್ಷಾವಲಿ ಅವರು ಜಯಭೇರಿ ಬಾರಿಸಿದ್ದರು. ಎಎಪಿ ಖಾತೆ ತೆರೆದು ನೆಲೆ ಕಂಡುಕೊಂಡಿತ್ತು. ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಫಲಿತಾಂಶ ಹೊರಬಿದ್ದ ವಾರದಲ್ಲೇ 9 ಸದಸ್ಯರು ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಈಗ ಬಿಜೆಪಿಯ ಸಂಖ್ಯಾಬಲ 19ಕ್ಕೆ ಏರಿಕೆಯಾಗಿದ್ದು, ನಗರಸಭೆ ಅಧಿಕಾರ ಹಿಡಿಯುವುದು ಖಚಿತವಾಗಿದೆ.

‘ನಮ್ಮ ಪಕ್ಷದ ಚಿಹ್ನೆಯಡಿ ಗೆದ್ದು ಬಿಜೆಪಿ ಸೇರಿರುವ ಶೇಕ್ಷಾವಲಿ ವಿಶ್ವಾಸದ್ರೋಹ ಎಸಗಿದ್ದಾರೆ. ಇದು ಅನಿರೀಕ್ಷಿತ ಬೆಳವಣಿಗೆ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ’ ಎಂದು ಎಎಪಿ ಜಿಲ್ಲಾ ಸಂಚಾಲಕ ವಿ.ಟಿ. ಮಲ್ಲಪ್ಪ ಪ್ರತಿಕ್ರಿಯಿಸಿದ್ದಾರೆ. ಶೇಕ್ಷಾವಲಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. 

‘ಪಕ್ಷದ ತತ್ವ, ಸಿದ್ಧಾಂತ ಒಪ್ಪಿ 9 ಜನ ಬಿಜೆಪಿ ಸೇರಿದ್ದಾರೆ. ಕುದುರೆ ವ್ಯಾಪಾರ ನಡೆಸಿಲ್ಲ’ ಎಂದು ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು