ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | ಬಾಗಿನ ಅರ್ಪಣೆಗೆ ಎರಡು ದಶಕಗಳ ಇತಿಹಾಸ

Published 2 ಸೆಪ್ಟೆಂಬರ್ 2023, 5:28 IST
Last Updated 2 ಸೆಪ್ಟೆಂಬರ್ 2023, 5:28 IST
ಅಕ್ಷರ ಗಾತ್ರ

ಚಂದ್ರಶೇಖರ ಕೋಳೇಕರ

ಆಲಮಟ್ಟಿ: ಭರ್ತಿಯಾಗಿರುವ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನ ಕೃಷ್ಣೆಯ ಜಲಧಿಗೆ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆ. 2ರಂದು ಬಾಗಿನ ಅರ್ಪಿಸಲಿದ್ದು, ಇದು ಕೃಷ್ಣೆಗೆ ಅರ್ಪಿಸುತ್ತಿರುವ ನಾಲ್ಕನೇ ಬಾಗಿನವಾಗಿದೆ.

ನಿರ್ಲಕ್ಷಕ್ಕೊಳಗಾಗಿದ್ದ ಕೃಷ್ಣೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಇಲ್ಲಿನ ಸಮಸ್ಯೆಗಳ ಬಗ್ಗೆ ಗೊತ್ತಾಗಲಿ, ಅದಕ್ಕಾಗಿ ಬಾಗಿನ ಅರ್ಪಣೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದು 2000ರಿಂದಲೇ ಹೋರಾಟ ನಡೆಸುತ್ತಿದ್ದವರು ಕೃಷ್ಣಾ ತೀರ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ. ಸರ್ಕಾರ ಬಾಗಿನ ಅರ್ಪಿಸಲಿ ಬಿಡಲಿ ಅವರು ಮಾತ್ರ ಪ್ರತಿ ವರ್ಷ ಕಡ್ಲಿಗರ ಹುಣ್ಣಿಮೆಗೆ ಬಾಗಿನ ಅರ್ಪಿಸುತ್ತಿದ್ದರು.

ಮೊದಲ ಬಾಗಿನ 2002

ಆ.31ಕ್ಕೆ ಆಲಮಟ್ಟಿ ಜಲಾಶಯದಲ್ಲಿ ಪ್ರಪ್ರಥಮ ಬಾರಿಗೆ ಗರಿಷ್ಠ ಮಟ್ಟ 519.60 ಮೀ.ವರೆಗೆ ನೀರು ಸಂಗ್ರಹಿಸಲಾಯಿತು. ಆಗ ಬಾಗಿನ ಅರ್ಪಿಸಬೇಕೆಂಬ ಕೂಗು ಹೆಚ್ಚಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣಾ ಸೆಪ್ಟೆಂಬರ್‌ನಲ್ಲಿ ಬಂದು ಕೃಷ್ಣೆಗೆ ಬಾಗಿನ ಅರ್ಪಿಸಿ, ಈ ಭಾಗದ ಯುಕೆಪಿಯ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಅಂದು ಆರಂಭಗೊಂಡ ಬಾಗಿನದ ಸಂಪ್ರದಾಯ ಪ್ರತಿ ಬಾರಿಯೂ ಆಯಾ ಕಾಲಘಟ್ಟದ ಮುಖ್ಯಮಂತ್ರಿಗಳಿಂದ ನಡೆದಿದೆ.

ಎರಡು ದಶಕದಲ್ಲಿ ಮೂರು ಬಾರಿ ನಡೆದಿಲ್ಲ ಬಾಗಿನ

2007ರಲ್ಲಿ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಗಳ ಪರವಾಗಿ ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಬಾಗಿನ ಅರ್ಪಿಸಿದ್ದರು. 2015ರಲ್ಲಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಇತಿಹಾಸದಲ್ಲಿಯೇ ಮೊದಲ ಬಾರಿ ಭರ್ತಿಯಾಗಲಿಲ್ಲ. 2016ರಲ್ಲಿ ಪುತ್ರ ರಾಕೇಶ ಅಕಾಲಿಕ ನಿಧನದ ಕಾರಣ ಈ ಎರಡೂ ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಕೃಷ್ಣೆಗೆ ಬಾಗಿನ ಸಲ್ಲಿಸಲಿಲ್ಲ. 2018ರಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ, ಹವಾಮಾನ ವೈಪರಿತ್ಯದಿಂದ ಹೆಲಿಕ್ಯಾಪ್ಟರ್ ಬಾರದ ಕಾರಣ ಆ ವರ್ಷವೂ ಬಾಗಿನ ನಡೆದಿಲ್ಲ. ಒಟ್ಟಾರೇ ಮೂರು ವರ್ಷ ಬಾಗಿನ ಅರ್ಪಣೆ ನಡೆದಿಲ್ಲ.

ಐದು ಬಾರಿ ಬಾಗಿನ ಅರ್ಪಿಸಿದ ಯಡಿಯೂರಪ್ಪ

2008,2009,2010, 2019,2020 ಹೀಗೆ ಐದು ಬಾರಿ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅತಿ ಹೆಚ್ಚು ಬಾರಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ. 2013,2014,2017 ರಲ್ಲಿ ಮೂರು ಬಾರಿ ಸಿದ್ಧರಾಮಯ್ಯ ಬಾಗಿನ ಅರ್ಪಿಸಿದ್ದು, ಸೆ.2 ರಂದು ಅವರು ಅರ್ಪಿಸುವ ನಾಲ್ಕನೇ ಬಾಗಿನವಾಗಿದೆ.

2006ರಲ್ಲಿ ರಾಷ್ಟ್ರಪತಿ ಬಾಗಿನ:

2006ರಲ್ಲಿ ಇಡೀ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 2006ರ ಆ.21ರಂದು ಲೋಕಾರ್ಪಣೆ ಮಾಡಲು ಆಗಮಿಸಿದ್ದ ಆಗಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಮೊಟ್ಟ ಮೊದಲ ಬಾರಿಗೆ ಬಾಗಿನ ಅರ್ಪಿಸಿದ ರಾಷ್ಟ್ರಪತಿಗಳು. 

ಆಗ ಜಲಾಶಯದ ಮೇಲೆ ನಿಂತು ಕೃಷ್ಣೆಗೆ ಬಾಗಿನ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT