ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

Published 29 ಸೆಪ್ಟೆಂಬರ್ 2023, 7:50 IST
Last Updated 29 ಸೆಪ್ಟೆಂಬರ್ 2023, 7:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ನೀಡಿದ ಕರ್ನಾಟಕ ಬಂದ್‌ಗೆ ವಿಜಯನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಸ್‌, ಆಟೊ, ಟ್ಯಾಕ್ಸಿ ಸಂಚಾರ ಎಂದಿನಂತಿತ್ತು. ಹೋಟೆಲ್‌ಗಳು, ಅಂಗಡಿಗಳು ತೆರೆದಿದ್ದವು. ಶಾಲಾ ಕಾಲೇಜುಗಳಲ್ಲಿ ಎಂದಿನಂತೆಯೇ ಪಾಠಗಳು ನಡೆದವು.

ನಗರದ ಮೇನ್‌ ಬಜಾರ್‌ ಪ್ರದೇಶದಲ್ಲಿ ಮಾತ್ರ ಕೆಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಆ ಭಾಗದ ಒಟ್ಟಾರೆ ಅಂಗಡಿಗಳ ಪೈಕಿ ಮುಚ್ಚಿದ ಅಂಗಡಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇತ್ತು.

ಸಾಂಕೇತಿಕ ಪ್ರತಿಭಟನೆ: ಹೊಸಪೇಟೆಯಲ್ಲಿ ಕನ್ನಡ ಪರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳ ಹತ್ತಾರು ಮಂದಿ ಗಾಂಧಿ ಪ್ರತಿಮೆ ಬಳಿಯಿಂದ ಪುನೀತ್‌ ರಾಜ್‌ಕುಮಾರ್ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ರಾಜ್ಯದ ಜನತೆಗೆ ಕುಡಿಯಲು ಸಹ ನೀರಿಲ್ಲದಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ತಪ್ಪು, ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಕೋರಿ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಾಂಕೇತಿಕವಾಗಿ ಮಾನವ ಸರಪಳಿ ನಡೆಸಿ, ಸಂಕ್ಷಿಪ್ತವಾಗಿ ಪ್ರತಿಭಟನೆ ನಡೆಸಲಾಯಿತು.

ವಿವಿಧ ಸಂಘಟನೆಗಳ ನಾಯಕರಾದ ಪಿ.ವಿ.ವೆಂಕಟೇಶ್, ಜೆ.ಕಾರ್ತಿಕ್‌, ಗುಜ್ಜಲ್ ಗಣೇಶ್, ವಿ.ಷಣ್ಮುಖ, ಗಂಟೆ ಸೋಮಶೇಖರ್‌, ಗುಂಡಿ ರಮೇಶ, ಗುಜ್ಜಲ್‌ ರಾಜು ಇತರರು ನೇತೃತ್ವ ವಹಿಸಿದ್ದರು.

ವಿಜಯನಗರ ಜಿಲ್ಲೆಯ ಇತರ ತಾಲ್ಲೂಕು ಕೇಂದ್ರಗಳು, ಹೋಬಳಿಗಳಲ್ಲಿ ಸಹ ಬಂದ್‌ನ ಯಾವುದೇ ಲಕ್ಷಣ ಕಾಣಿಸಲಿಲ್ಲ. 

ಬಳ್ಳಾರಿ ಜಿಲ್ಲೆಯಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT