ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ವಿಜಯನಗರದಿಂದ ವಿಜಯೇಂದ್ರ ಸ್ಪರ್ಧೆ?

ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರಿನಲ್ಲಿ ಗೆಲ್ಲಲ್ಲು ಯೋಜನೆ
Last Updated 12 ಫೆಬ್ರುವರಿ 2022, 8:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವುದರ ಬಗ್ಗೆ ಪಕ್ಷ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಬರಲಿರುವ ಚುನಾವಣೆಯಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ 20 ವಿಧಾನಸಭಾ ಕ್ಷೇತ್ರಗಳನ್ನು ಶತಾಯ ಗತಾಯ ಗೆಲ್ಲಬೇಕೆಂದು ಬಿಜೆಪಿ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಅದರ ಭಾಗವಾಗಿ ವಿಜಯೇಂದ್ರ ಅವರನ್ನು ವಿಜಯನಗರದಿಂದ ಕಣಕ್ಕಿಳಿಸುವುದು ಪಕ್ಷದ ಯೋಜನೆ.

ನಾಲ್ಕೂ ಜಿಲ್ಲೆಗಳಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಠ ಮಾನ್ಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದರೆ ಸಹಜವಾಗಿಯೇ ಆ ಸಮುದಾಯದವರು ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ. ವಿಜಯೇಂದ್ರ ಯುವಕರಾಗಿರುವುದರಿಂದ ಯುವಕರನ್ನು ಪ್ರಭಾವಿಸಬಹುದು. ಮೂರು ಜಿಲ್ಲೆಗಳಲ್ಲಿ ಸಮುದಾಯದ ಮತಗಳು ಧ್ರುವೀಕರಣಗೊಂಡು, ಇತರೆ ವರ್ಗದವರು ಬೆಂಬಲಿಸಿದರೆ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಪಕ್ಷದ ವರಿಷ್ಠರದ್ದು ಎಂದು ಗೊತ್ತಾಗಿದೆ.

ಈ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿ ನಿಷ್ಠರಿಂದ ವರಿಷ್ಠರು ಅಭಿಪ್ರಾಯ ಕೂಡ ಸಂಗ್ರಹಿಸಿದ್ದಾರೆ.ಅವರ ಯೋಜನೆಗೆ ಅನುಗುಣವಾಗಿಯೇ ಸ್ಥಳೀಯ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಷಯವನ್ನು ಹೆಸರು ಹೇಳಲಿಚ್ಛಿಸದ ಸ್ಥಳೀಯ ಬಿಜೆಪಿ ಮುಖಂಡರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ವಿಜಯೇಂದ್ರ ಅವರನ್ನು ವಿಜಯನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸುವ ಕುರಿತು ಪಕ್ಷದಲ್ಲಿ ಚಿಂತನೆ ನಡೆಯುತ್ತಿರುವುದು ನಿಜ. ಆದರೆ, ಇನ್ನೂ ಯಾವುದು ಕೂಡ ಅಂತಿಮಗೊಂಡಿಲ್ಲ. ಗಂಗಾವತಿಯಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ವಿಜಯೇಂದ್ರ ಅವರನ್ನು ಈ ಭಾಗದಿಂದ ಕಣಕ್ಕಿಳಿಸಿದರೆ ಪಕ್ಷಕ್ಕೆ ಅನುಕೂಲವಾಗುವುದು ಖಚಿತ. ಅವರೊಬ್ಬ ಉತ್ತಮ ಸಂಘಟನಾಕಾರರು. ಯುವಕರು ದೊಡ್ಡ ಮಟ್ಟದಲ್ಲಿ ಪಕ್ಷವನ್ನು ಬೆಂಬಲಿಸಬಹುದು’ ಎಂದು ಹೇಳಿದ್ದಾರೆ.

ಜೊಲ್ಲೆ ನೇಮಕ ಹಿಂದಿದೆ ಲೆಕ್ಕಾಚಾರ:ವಿಜಯೇಂದ್ರ ಅವರನ್ನು ವಿಜಯನಗರದಿಂದ ಕಣಕ್ಕಿಳಿಸುವ ಉದ್ದೇಶದಿಂದಲೇ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಲಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಶಶಿಕಲಾ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯವಿದೆ. ಅಲ್ಲಿಯವರೆಗೆ ಜಿಲ್ಲೆಯಲ್ಲಿ ಓಡಾಡಿ ವಿಜಯೇಂದ್ರ ಸ್ಪರ್ಧೆಗೆ ಪೂರಕ ವಾತಾವರಣ ಸೃಷ್ಟಿಸುವುದು ಕೂಡ ಅವರ ನೇಮಕದ ಹಿಂದಿನ ಲೆಕ್ಕಾಚಾರ ಇದೆ ಎನ್ನಲಾಗಿದೆ.

ಈ ಸಂಬಂಧ ಬಿ.ವೈ.ವಿಜಯೇಂದ್ರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT