ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿಫಲ ಕೊಳವೆ ಬಾವಿ-ದುರ್ಘಟನೆಗೆ ಅವಕಾಶ ಕೊಡಬೇಡಿ’

Published 15 ಏಪ್ರಿಲ್ 2024, 15:55 IST
Last Updated 15 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸ ಕೊಳವೆ ಬಾವಿಗಳನ್ನು ತೋಡಿದಾಗ ವಿಫಲವಾದಲ್ಲಿ ಅದಕ್ಕೆ ಮುಚ್ಚಳ ಮುಚ್ಚಿ ಕೇಸಿಂಗ್ ಪೈಪಿಗೆ ಕಟ್ಟೆ ಕಟ್ಟಿ ಮುಂದಿನ ದಿನಗಳಲ್ಲಿ ಕಳ್ಳತನ ಅಥವಾ ಹಾಳಾಗದಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ. ಹೇಳಿದರು.

ಒಂದು ವೇಳೆ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗಳ ಸಭೆಯಲ್ಲಿ ಎಚ್ಚರಿಸಿದರು.

‘ವಿಫಲ ಕೊಳವೆ ಬಾವಿಗಳನ್ನು ಮುಚ್ಚಿಸಲು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಹೊರಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ, ಸಂಬಂಧಿಸಿದ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ದುರ್ಘಟನೆಗಳು ಜರುಗದಂತೆ ತಡೆಯಬೇಕಿದೆ. ಸದ್ಯ ಬರಗಾಲದ ಹಿನ್ನೆಲೆಯಲ್ಲಿ ಅಂತರ್ಜಲ ಬತ್ತಿರುವ ಕೊಳವೆ ಬಾವಿಗಳಲ್ಲಿ ಮೋಟಾರ್ ಪಂಪ್ ಹೊರಕ್ಕೆ ತೆಗೆದಿದ್ದರೆ ಮುಚ್ಚಳ ಮುಚ್ಚಿ ಮುಂದಿನ ದಿನಗಳಲ್ಲಿ ಮಳೆಯಾಗಿ ನೀರು ಮರುಪೂರ್ಣವಾದರೆ ಅದನ್ನು ಬಳಸಲು ಬರುವಂತೆ ಸಂರಕ್ಷಿಸಬೇಕು’ ಎಂದರು.

ಚುನಾವಣಾ ಕಾರ್ಯದ ನಡುವೆಯೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಗುಳೆ–3 ದಿನದೊಳಗೆ ವರದಿ ನೀಡಿ: ‘ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನರು ದುಡಿಮೆ ಸಲುವಾಗಿ ರಾಜ್ಯದ ವಿವಿಧ ಭಾಗಗಳಿಗೆ ಗುಳೆ ಹೋಗಿರುವ ಸಂಪೂರ್ಣ ವಿವರ ಮತ್ತು ಅವರ ಸಂಪರ್ಕಿಸುವ ಮಾಹಿತಿಯನ್ನು ಪಡೆದು ಅವರು ಮತದಾನದಿಂದ ವಂಚಿತರಾಗದಂತೆ ಮಾಡಬೇಕಿದೆ ಹಾಗೂ ಮತದಾನದ ಪ್ರಮಾಣ ಕಡಿಮೆಯಾದ ಮತಗಟ್ಟೆಗಳ ವಿವರವನ್ನು ಅವಲೋಕಿಸಿ ಮೂರು ದಿನಗಳೊಳಗೆ ವರದಿ ನೀಡಬೇಕು’ ಎಂದು ಸಿಇಒ ಸೂಚಿಸಿದರು.

ನರೇಗಾ ಕಾಮಗಾರಿ ನಡೆಯುವ ಸಂದರ್ಭಗಳಲ್ಲಿ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸೆ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT