ಶನಿವಾರ, ಅಕ್ಟೋಬರ್ 1, 2022
20 °C

ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ- ನನ್ನ ಮನವಿಗೆ ಸಿಎಂ ಸ್ಪಂದನೆ– ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆರೋಗ್ಯದ ದೃಷ್ಟಿಯಿಂದ ಹಾಗೂ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣಕ್ಕೆ ಅನುವು ಮಾಡಿಕೊಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ. ನಾನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ನನ್ನ ಮನವಿಗೆ ಸ್ಪಂದಿಸಿ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಸಚಿವ ಆನಂದ್‌ ಸಿಂಗ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಕ್ಷ ಯಾರಿಗೂ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಅದು ಪಕ್ಷದ ತೀರ್ಮಾನವಾಗಿದ್ದು, ಎಲ್ಲರೂ ಗೌರವಿಸಬೇಕು. ನನಗೆ ನೆರೆಯ ಕೊಪ್ಪಳ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ. ಸನಿಹದಲ್ಲೇ ಇರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುವುದಿಲ್ಲ. ಎರಡೂ ಜಿಲ್ಲೆಗಳ ನಡುವೆ ಸಂಚರಿಸುತ್ತ ಇರುತ್ತೇನೆ ಎಂದರು.

ಬೆಂಗಳೂರಿನಲ್ಲಿ ಟಿಪ್ಪು ಪೋಸ್ಟರ್‌ ಹರಿದು ಹಾಕಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ದೇಶದ ಅತಿ ಎತ್ತರದ ಧ್ವಜ ಸ್ತಂಭದಿಂದ ಪ್ರವಾಸೋದ್ಯಮಕ್ಕೆ ಸಿಗಲಿದೆ ಉತ್ತೇಜನ

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಭಾನುವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ನಿರ್ಮಿಸುತ್ತಿರುವ 405 ಅಡಿ ಎತ್ತರದ ಧ್ವಜ ಸ್ತಂಭದ ಅಂತಿಮ ಹಂತದ ಕಾಮಗಾರಿ ಪರಿಶೀಲಿಸಿದರು.

‘405 ಅಡಿ ಎತ್ತರದ ಧ್ವಜ ಸ್ತಂಭದ ನಿರ್ಮಾಣದಿಂದ ವಿಜಯನಗರ ಹೊಸ ಇತಿಹಾಸ ಸೃಷ್ಟಿಸಲಿದೆ. ಆ.15ರಂದು ಧ್ವಜಾರೋಹಣ ನೆರವೇರಿಸಲಾಗುವುದು.

ಇದುವರೆಗೆ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಗೆ ಬೆಳಗಾವಿ ಜಿಲ್ಲೆ ಹೊಂದಿತ್ತು. ಅದು 361 ಅಡಿ ಎತ್ತರದಾಗಿದೆ. ಅತ್ಯುನ್ನತ ತಂತ್ರಜ್ಞಾನದ ಸಹಾಯದಿಂದ 405 ಅಡಿ ಎತ್ತರದ ಧ್ವಜ ಸ್ತಂಭ ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಇದಕ್ಕಿಂತ ದೊಡ್ಡ ಸ್ತಂಭ ಸ್ಥಾಪಿಸುವುದು ಸುಲಭದ ಕೆಲಸವಲ್ಲ ಎಂದು ಸ್ವತಃ ತಂತ್ರಜ್ಞರೇ ತಿಳಿಸಿದ್ದಾರೆ’ ಎಂದು ಸಚಿವ ಆನಂದ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.
ಧ್ವಜಸ್ತಂಭದ ಜೊತೆ ಇನ್ನೆರಡು ಸ್ತಂಭಗಳನ್ನು ಸ್ಥಾಪಿಸಲಾಗುತ್ತದೆ.

ಅವುಗಳಿಂದ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನೆರಡು ತಿಂಗಳೊಳಗೆ ಮೈದಾನದಲ್ಲಿ ವಾಕಿಂಗ್‌ ಪಥ, ವಿದ್ಯುತ್‌ ದೀಪಗಳ ಅಲಂಕಾರ ಮಾಡಿ, ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತದೆ. ನಿರಂತರವಾಗಿ ಪ್ರತಿ ವಾರಾಂತ್ಯಕ್ಕೆ ದೇಶಭಕ್ತಿ ಕಾರ್ಯಕ್ರಮ ಆಯೋಜಿಸುವ ಯೋಜನೆಯೂ ಇದೆ ಎಂದು ಮಾಹಿತಿ ಹಂಚಿಕೊಂಡರು.

ವಿಶ್ವ ಪ್ರಸಿದ್ಧ ಹಂಪಿ ಇರುವುದರಿಂದ ದೇಶ–ವಿದೇಶದ ಪ್ರವಾಸಿಗರು ಬಂದು ಹೋಗುತ್ತಿರುತ್ತಾರೆ. ದೇಶದ ಅತಿ ಎತ್ತರದ ಧ್ವಜ ಸ್ತಂಭಕ್ಕೂ ಭೇಟಿ ಕೊಡುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಆ. 15ರಂದು ವಿಜಯನಗರದಲ್ಲಿ ಇತಿಹಾಸ ಸೃಷ್ಟಿಯಾಗಲಿದ್ದು, ಪ್ರತಿಯೊಬ್ಬರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕು. ಸಂಜೆ 5ಕ್ಕೆ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬೆಂಗಳೂರಿನ ಕಲಾತಂಡದವರು ‘ವಿಜಯನಗರ ವೈಭವ’ ಪ್ರಸ್ತುತಪಡಿಸುವರು. ಇನ್ನುಳಿದ ಕಾರ್ಯಕ್ರಮಗಳನ್ನು ಸ್ಥಳೀಯ ಕಲಾವಿದರು ನಡೆಸಿಕೊಡುವರು ಎಂದು ತಿಳಿಸಿದರು.

ಬಜಾಜ್‌ ಕಂಪನಿಯ 80ರಿಂದ 85 ನುರಿತ ಕಾರ್ಮಿಕರು ಧ್ವಜ ಸ್ತಂಭದ 13 ಬಿಡಿಭಾಗಗಳನ್ನು ಜೋಡಿಸಿದ್ದಾರೆ. ವಿಪರೀತ ಗಾಳಿ ಇದ್ದದ್ದರಿಂದ ಸ್ವಲ್ಪ ವಿಳಂಬವಾಯಿತು. ಅದನ್ನು ಮೀರಿಯೂ ಉತ್ತಮ ಕೆಲಸ ಮಾಡಿದ್ದಾರೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಇನ್ನು, ತಿಂಗಳೊಳಗೆ ಗುಂಡಾ ಸಸ್ಯ ಉದ್ಯಾನದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್‌ ಆರಂಭಿಸಲಾಗುವುದು ಎಂದು ಘೋಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು