ಹೊಸಪೇಟೆ : ನಗರಸಭೆಯ ಕೆಲಸಗಳಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಒಕ್ಕೊರಲ ಆಕ್ಷೇಪ, ಸ್ಮಶಾನದಿಂದ ಉಂಟಾಗುವ ದುರ್ವಾಸನೆಗೆ ವಿರೋಧ ಸೂಚಿಸಿದಾಗ ಕೈ ಕೈ ಮಿಲಾಯಿಸುವ ಮಟ್ಟಿಗೆ ತೆರಳಿದ ಮಾತಿನ ಯುದ್ಧ, ನಗರಸಭೆಯ ಆಸ್ತಿಗಳಿಗೆ ಬೇಲಿ ಹಾಕಬೇಕೆಂಬ ನಿರ್ಣಯವನ್ನು ಪಾಲಿಸದ ಆಯುಕ್ತರಿಗೆ ತರಾಟೆ, ಬಾಡಿಗೆ ಕಟ್ಟಡಗಳ ವಿಚಾರದಲ್ಲಿ ದಾಖಲೆ ಸರಿಯಾಗಿ ಇಟ್ಟುಕೊಳ್ಳದ ಅಧಿಕಾರಿಗಳಿಗೆ ಛೀಮಾರಿ...
ಹೊಸಪೇಟೆ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಂಭವಿಸಿದ ಹಲವು ವಿದ್ಯಮಾನಗಳಲ್ಲಿ ಕೆಲವು ಮಾತ್ರ ಇವು. ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯ ಉದ್ದಕ್ಕೂ ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರಿಂದ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಯಿತು.
ಸಭೆ ಕೊನೆಗೊಂಡು ಅಧ್ಯಕ್ಷರ ಅಪ್ಪಣೆ ಮೇರೆಗೆ ಮೀಸಲಿಟ್ಟ ಸಮಯದಲ್ಲಿ ವಾರ್ಡ್‌ಗಳಲ್ಲಿ ಶಾಸಕರ ಪ್ರತಿನಿಧಿಗಳು ನಗರಸಭೆ ಸಿಬ್ಬಂದಿಯಿಂದಲೇ ಕೆಲಸ ಮಾಡಿಸಿ, ತಾವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುತ್ತಿರುವುದನ್ನು ಉಪಾಧ್ಯಕ್ಷ ರೂಪೇಶ್ ಕುಮಾರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ದನಿಗೂಡಿಸಿದ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಶಾಸಕರಿಗೆ ಇಡೀ ತಾಲ್ಲೂಕಿನ ಹೊಣೆಗಾರಿಕೆ ಇದೆ, ಅದನ್ನು ನಿಭಾಯಿಸಲಿ, ನಗರಸಭೆಗೆ ಬಂದು ಸಮಸ್ಯೆ ತಿಳಿದುಕೊಳ್ಳಲಿ, ಅದರ ಬದಲಿಗೆ ನಗರಸಭೆಯ ಸಿಬ್ಬಂದಿಯಿಂದ ಕೆಲಸ ಮಾಡಿಸಿ, ತಮ್ಮಿಂದಲೇ ಎಲ್ಲವೂ ಆಯಿತು ಎಂಬಂತೆ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದರು.
‘ಜನರ ಸಮಸ್ಯೆ ಆಲಿಸುವುದಕ್ಕಾಗಿಯೇ ಪ್ರತಿ ವಾರ್ಡ್‌ನಲ್ಲಿ ಐದಾರು ಸಾವಿರ ಮತದಾರರು ನಮ್ಮನ್ನು ಆರಿಸಿದ್ದಾರೆ. ಪ್ರತಿನಿಧಿ ಇಟ್ಟುಕೊಂಡು ನಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ನಗರದ ಬಡವರಿಗೆ ಸೂರು ಕಲ್ಪಿಸುವುದು, ನಿವೇಶನಗಳ ನೋಂದಣಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ, ಇದು ಪಕ್ಷಾತೀತವಾಗಿ ನಿಮ್ಮಲ್ಲಿ ಮಾಡುವ ಮನವಿ’ ಎಂದು ಜಂಬುನಾಥ ಅವರು ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಉಲ್ಲೇಖಿಸಿ ನುಡಿದರು.
ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ಯುದ್ಧ: ಜಂಬುನಾಥ ರಸ್ತೆಯಲ್ಲಿನ ಸಾರ್ವಜನಿಕ ಮುಕ್ತಿಧಾಮದಲ್ಲಿ ಹೆಣಗಳನ್ನು ಸುಡುವುದರಿಂದ ಸುತ್ತಮುತ್ತ ತುಂಬಾ ವಾಸನೆ ಬರುತ್ತದೆ. ತಕ್ಷಣ ಅದನ್ನು ಸ್ಥಳಾಂತರಿಸಬೇಕು ಎಂದು ಕೋರಿ 22ನೇ ವಾರ್ಡ್ ಸದಸ್ಯ ಶೇಕ್ಷಾವಲಿ ಅವರು ಬರೆದ ಪತ್ರಕ್ಕೆ ರಮೇಶ್ ಗುಪ್ತ ಆಕ್ಷೇಪ ವ್ಯಕ್ತಪಡಿಸಿದರು. ಬೇರೆ ಸ್ಥಳ ನೀಡುವರೆಗೆ ಅದೇ ಸ್ಥಳದಲ್ಲಿ ಹೆಣ ಸುಡಲು ಅವಕಾಶ ನೀಡಬೇಕು, ನಗರಸಭೆ ವಿದ್ಯುತ್ ಚಿತಾಗಾರ ನೀಡಲಿ, ಅದರ ಹೊರತು ಸ್ಮಶಾನ ಸ್ಥಳಾಂತರ ಸಾಧ್ಯವಿಲ್ಲ ಎಂದರು. ಈ ಬಗ್ಗೆ ಸಭೆ ಕರೆದು ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಉಪಾಧ್ಯಕ್ಷ ರೂಪೇಶ್ ಕುಮಾರ್ ಸಮಾಧಾನಪಡಿಸಲು ಯತ್ನಿಸಿದರು.
ಈ ಹಂತದಲ್ಲಿ ಅಕ್ಕಪಕ್ಕದಲ್ಲೇ ಕುಳಿತಿದ್ದ ಶೇಕ್ಷಾವಲಿ ಮತ್ತು ರಮೇಶ್ ಗುಪ್ತ ನಡುವೆ ವಾಗ್ಯುದ್ಧ ತಾರಕಕ್ಕೇರಿತು. ಈ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಗುಪ್ತ ಆರೋಪಕ್ಕೆ ಶೇಕ್ಷಾವಲಿ ಖಾರವಾಗಿ ಪ್ರತಿಕ್ರಿಯಿಸಿ, ಇದು ಈ ಭಾಗದ ಜನರ ಸಮಸ್ಯೆ, ಸದಸ್ಯನಾಗಿ ನಾನು ಅದನ್ನು ಹೇಳಲೇಬೇಕಾಗುತ್ತದೆ ಎಂದರು. ಒಂದು ಹಂತದಲ್ಲಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಇತರ ಸದಸ್ಯರು, ನಗರಸಭೆ ಅಧಿಕಾರಿ ರವಿಕುಮಾರ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಕೈಮೀರುವುದನ್ನು ತಡೆದರು.
16ನೇ ವಾರ್ಡ್‌ನ ಎಂ.ಮುಮ್ತಾಜ್ ಬೇಗಂ ಕಲಂದರ್ ಅವರು ಚಲುವಾದಿಕೇರಿ, ಎಸ್.ಆರ್.ನಗರ, ರಘು ಪ್ಲಾಟ್‌ಗಳಲ್ಲಿ ಯುಜಿಡಿ ಮತ್ತು 24x7 ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು. ₹4.26 ಕೋಟಿಯ ಟೆಂಡರ್ ಮೊತ್ತದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ, ಇನ್ನು ಆರು ತಿಂಗಳ ಸಮಯ ಇದೆ ಎಂದು ಎಇಇ ಬಿ.ಸತೀಶ್ ಹೇಳಿದಾಗ ಸದಸ್ಯರು ಸಿಟ್ಟಿಗೆದ್ದರು. ಕನಕ ಸರ್ಕಲ್‌ನಿಂದ ಸಪ್ತಗಿರಿ ಶಾಲೆವರೆಗಿನ ಯುಜಿಡಿ ಕೆಲಸ ಈಗ ನಡೆಯುತ್ತಿದೆ, ಅದು ಕೊನೆಗೊಂಡಾಗ ನಗರದ ಶೇ 80ರಷ್ಟು ಸಮಸ್ಯೆಗಳು ಬಗೆಹರಿಯಲಿದೆ ಎಂದರು. ವಿಳಂಬ ಕಾಮಗಾರಿಯ ಬಗ್ಗೆ ಸದಸ್ಯೆ ಮುನ್ನಿ ಅವರು ಸಹ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಮೂರು ತಿಂಗಳೊಳಗೆ ಕೆಲಸ ಮುಗಿಸಿಕೊಡುವುದಾಗಿ ಎಇಇ ಭರವಸೆ ನೀಡಿದರು.
ಅಧ್ಯಕ್ಷೆ ಎ.ಲತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಇದ್ದರು.
Highlights - ಕಲಾಮಂದಿರದಲ್ಲಿ ತುಕ್ಕು ಹಿಡಿಯುತ್ತಿರುವ 164 ವೀಲ್‌ಚೇರ್–ಮಹಮ್ಮದ್ ಗೌಸ್ ಆಕ್ಷೇಪ ಬಳಕೆಯಾಗದ ವಾಹನ–ಅಬ್ದುಲ್ ಖಾದಿರ್ ಟೀಕೆ ಸರ್ಕಾರಿ ಜಮೀನು ರಕ್ಷಣೆ–ವಿಶೇಷ ಕಾರ್ಯಾಚರಣೆಗೆ ರಾಘವೇಂದ್ರ ಒತ್ತಾಯ
Cut-off box - ಶ್ರೀರಾಮುಲು ಮಗಳ ಮದುವೆಗೆ ಆಹ್ವಾನ! ಸಭೆ ಆರಂಭವಾಗುವುದಕ್ಕೆ ಮೊದಲು ಮಾಜಿ ಸಂಸದೆ ಶಾಂತಾ ಅವರು ಬಂದು ಶ್ರೀರಾಮುಲು ಅವರ ಎರಡನೇ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಸದಸ್ಯರಿಗೆ ಹಂಚಿದರು. ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಹ ಸಭೆಗೆ ಬಂದು ಇದೇ 27ರಂದು ನಗರದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಗರಸಭೆಯಿಂದ ದೊರಕಬಹುದಾದ ಧನಸಹಾಯ ಯಾಚಿಸಿದರು.
Cut-off box - ಬಾಡಿಗೆ ಕಟ್ಟಡ–ದಾಖಲೆಯೇ ಇಲ್ಲ ನಗರಸಭೆಯಲ್ಲಿ 135 ಕಟ್ಟಡಗಳು ಬಾಡಿಗೆಗೆ ನೀಡಲಾಗಿದೆ. ಕೆಲವು ಮಳಿಗೆಗಳ ತೆರವಿಗೆ ನೋಟಿಸ್ ನೀಡಲಾಗಿದೆ. ಆದರೆ ಅಧಿಕಾರಿಗಳು ದಾಖಲೆಯನ್ನೇ ಇಟ್ಟುಕೊಂಡಿಲ್ಲ. ಇದರಿಂದ ಕಟ್ಟಡಗಳ ತೆರವಿಗೆ ಸಮಸ್ಯೆಯಾಗಿದೆ. ಕಳೆದ ಸಭೆಗಳಲ್ಲಿ ಹೇಳಿದ್ದರೂ ಕೆಲಸ ಮಾಡದ ಅಧಿಕಾರಿಗಳಿಂದಾಗಿ ನಗರಸಭೆಗೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ಎಲ್.ಎಸ್.ಆನಂದ್ ಗಂಭೀರ ಆರೋಪ ಮಾಡಿದರು. ವಾರ್ಷಿಕ ₹ 45 ಲಕ್ಷ ಬಾಡಿಗೆ ಬರಬೇಕಾದಲ್ಲಿ ಸದ್ಯ ₹14 ಲಕ್ಷ ಆದಾಯ ಮಾತ್ರ ಬರುತ್ತಿದೆ. ಹೇಳಿದರೂ ದಾಖಲೆ ಸರಿಯಾಗಿ ಇಟ್ಟುಕೊಳ್ಳದ ಅಧಿಕಾರಿಗಳನ್ನು ನೀವು ಪ್ರಶ್ನಿಸುವುದಿಲ್ಲವೇ ಎಂದು ಅವರು ಆಯುಕ್ತರನ್ನು ಖಾರವಾಗಿ ಪ್ರಶ್ನಿಸಿದರು. ಅಬ್ದುಲ್ ಖಾದಿರ್ ಸಹ ಇದಕ್ಕೆ ಧ್ವನಿಗೂಡಿಸಿದರು.
Cut-off box - ಆಶ್ರಯ ಮನೆ ಜಾಗಕ್ಕೆ ಬೇಲಿ–ಆಯುಕ್ತ ತಬ್ಬಿಬ್ಬು ನಗರದಲ್ಲಿ ರಾಜೀವ್ ಗಾಂಧಿ ನಿಗಮದಿಂದ ಆಶ್ರಯ ಮನೆ ನಿರ್ಮಾಣ ಯೋಜನೆಗೆ ನಗರಸಭೆ ಸೂಕ್ತ ರೀತಿಯಿಂದ ಸ್ಪಂದಿಸದೇ ಇರುವುದನ್ನು ವಡ್ಡರ ಗಾಳೆಪ್ಪ ಸಭೆಯ ಗಮನಕ್ಕೆ ತಂದರು. 600 ಮನೆಗಳನ್ನು ಹಂಚಬೇಕಿದೆ. ಈ ಬಾರಿ 135 ಮನೆಗಳನ್ನು ನೀಡಬೇಕಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಂದಿಲ್ಲ ಎಂದು ಆಯುಕ್ತರು ಸಮಜಾಯಿಸಿ ನೀಡಿದಾಗ ಶಾಸಕರಿಗೆ ಹೇಳಿ ಕೆಲಸ ಮಾಡಿಸಲು ಏಕೆ ಹಿಂದೇಟು ಎಂದು ಗುಜ್ಜಲ್ ಹನುಮಂತಪ್ಪ ತಾರಿಹಳ್ಳಿ ಜಂಬುನಾಥ ಇತರರು ಪ್ರಶ್ನಿಸಿದರು. ನಗರಸಭೆಯ ನಿವೇಶನಗಳಿಗೆ ಬೇಲಿ ಹಾಕಿ ಅವುಗಳ ಒತ್ತುವರಿ ತಡೆಯಬೇಕು ಎಂಬ ಬಗ್ಗೆ ಹಿಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದರೂ ಒಂದಿಷ್ಟು ಕೆಲಸವೂ ಆಗದ್ದಕ್ಕೆ ಸದಸ್ಯರು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.