ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಜಿಲ್ಲೆಯಲ್ಲಿ ಗ್ಯಾರಂಟಿ ಪ್ರಚಾರ ಮರೆಯಿತೇ ಕಾಂಗ್ರೆಸ್?

Published 12 ಮಾರ್ಚ್ 2024, 5:33 IST
Last Updated 12 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಕುರಿತಂತೆ ಪ್ರಚಾರ ಸಮಾವೇಶ ಬಳ್ಳಾರಿಯಲ್ಲಿ ಸೋಮವಾರ ನಡೆದಿದ್ದು, ವಿಜಯನಗರ ಜಿಲ್ಲೆಯಲ್ಲಿ ಈ ಸಮಾವೇಶ ನಡೆಯುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯೂ ನಡೆಯದೆ ಇರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಮತ್ತು ಈ ಭಾಗದ ಶಾಸಕರು ಆಸಕ್ತಿ ವಹಿಸಿ ಪೂರ್ವಭಾವಿ ಸಭೆ ನಡೆಸಬೇಕಿತ್ತು. ಉಸ್ತುವಾರಿ ಸಚಿವರು ಇತ್ತ ಬಂದೇ ಇಲ್ಲ. ಇತರ ಶಾಸಕರೂ ಇದರ ಬಗ್ಗೆ ಗಮನಹರಿಸಿಲ್ಲ. ಇದರಿಂದಾಗಿಯೇ ಗ್ಯಾರಂಟಿ ಸಮಾವೇಶ ನಗರದಲ್ಲಿ ನಡೆಯುವ ಲಕ್ಷಣವೇ ಕಾಣಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ಆಡಿಕೊಂಡಿದ್ದಾರೆ.

‘ಕೆಪಿಸಿಸಿ ಕಚೇರಿಯಿಂದ ಸಮಯ ಕೊಡುತ್ತಾರೆ. ಅದರಂತೆಯೇ ಗ್ಯಾರಂಟಿ ಸಮಾವೇಶ ನಡೆಸಬೇಕಾಗುತ್ತದೆ. ವಿಜಯನಗರ ಜಿಲ್ಲೆಯಲ್ಲೂ ಶೀಘ್ರವೇ ನಡೆಯಲಿದೆ. ದಿನಾಂಕ ನಿಗದಿಯಾದ ತಕ್ಷಣ ಸಮಾವೇಶಕ್ಕೆ ಸಿದ್ಧತೆಗಳೂ ಆಗಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮಾಧ್ಯಮ ಸಲಹೆಗಾರರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾಕೆ ಬೇಗ ಆಗಬೇಕು?: ‘ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವುದಿಂದ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಅಗತ್ಯ ಇದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ₹4ರಿಂದ ₹5 ಸಾವಿರದಷ್ಟು ಹಣ ಜನರಿಗೆ ನೇರವಾಗಿ ಸಂದಾಯವಾಗುತ್ತಿದೆ. ಇದನ್ನು ಪ್ರಚಾರ ಮಾಡುವುದಕ್ಕೆ ನಮಗೆ ಉತ್ತಮ ಅವಕಾಶ ಒದಗಿ ಬಂದಿರುವಾಗ ಅದನ್ನು ಕೈಚೆಲ್ಲಬಾರದು ಎಂಬುದೇ ನಮ್ಮ ಕಳಕಳಿ, ಶೀಘ್ರ ಕಾರ್ಯಕ್ರಮ ನಡೆಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಜಿಲ್ಲೆಗಳಲ್ಲಿ ತಾಲ್ಲೂಕು ಮಟ್ಟದಲ್ಲೂ ಗ್ಯಾರಂಟಿ ಸಮಾವೇಶಗಳು ನಡೆದಿವೆ. ಕಾರ್ಕಳದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಗ್ಯಾರಂಟಿ ಯೋಜನೆಯನ್ನು ಹೊಗಳಿದ್ದು ದೊಡ್ಡ ಸುದ್ದಿಯಾಗಿತ್ತು. ವಿಜಯನಗರ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಮಾವೇಶವಾದರೂ ಆಗಿದ್ದರೆ ಜನರಿಗೆ ಅದನ್ನು ತಿಳಿಸುವ ಪ್ರಯತ್ನ ಮಾಡಬಹುದಿತ್ತು’ ಎಂದು ಪ್ರಧಾನ ಕಾರ್ಯದರ್ಶಿ ನಿಂಬಗಲ್‌ ರಾಮಕೃಷ್ಣ ಅಭಿಪ್ರಾಯಪಟ್ಟರು.

ಒಂದೂ ಸಭೆ ಕರೆದಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪಕ್ಷದ ಸಂಘಟನೆ, ಸರ್ಕಾರದ ಯೋಜನೆಗಳ ಕುರಿತಂತೆ ಪಕ್ಷದ ಶಾಸಕರು, ಕಾರ್ಯಕರ್ತರನ್ನು ಒಳಗೊಂಡಂತೆ ಒಂದು ಸಭೆಯನ್ನೂ ಕರೆದಿಲ್ಲ. ಇದರಿಂದ ಜಿಲ್ಲೆಯ ನಿಷ್ಠಾವಂತ ಕಾರ್ಯರ್ತರಿಗೆ ಬಹಳ ಬೇಸರ ಉಂಟಾಗಿದೆ. ಲೋಕಸಭಾ ಚುನಾವಣೆ ಮೇಲೆ ಇದು ಪರಿಣಾಮ ಬೀರುವ ಅಪಾಯವೂ ಇದೆ ಎಂದು ಹೆಸರು ಹೇಳಲು ಬಯಸದ ಪಕ್ಷದ ಮುಖಂಡರೊಬ್ಬರು ತಿಳಿಸಿದರು.

Quote - ಜಿಲ್ಲೆಯಲ್ಲಿ ಸಮಾವೇಶ ಮಾಡಬೇಕಾಗಿತ್ತು. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಜೊತೆಗೆ ಮಾತನಾಡಿ ಮುಂದಿನ ದಿನಗಳಲ್ಲಿ ಸಮಾವೇಶ ಮಾಡಲು ಪ್ರಯತ್ನಿಸುವೆ ಸಿರಾಜ್ ಶೇಖ್ ಜಿಲ್ಲಾಧ್ಯಕ್ಷ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT